ಮಾಜಿ ಸಚಿವನ ಖುಲಾಸೆ ತೀರ್ಪು ಎತ್ತಿಹಿಡಿದ ಹೈಕೋರ್ಟ್
ತಮಿಳುನಾಡು: ಕಲರ್ ಟಿವಿ ಹಗರಣ

ಚೆನ್ನೈ, ಜು.31: ಸುಮಾರು ಎರಡು ದಶಕಗಳ ಹಿಂದೆ ತಮಿಳುನಾಡು ಸರಕಾರದ ಯೋಜನೆಗಾಗಿ ಕಲರ್ ಟಿವಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಟಿ.ಎಂ.ಸೆಲ್ವಗಣಪತಿಯವರನ್ನು ಖುಲಾಸೆಗೊಳಿಸಿದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
1994-96ರ ಅವಧಿಯಲ್ಲಿ ಜಯಲಲಿತಾ ಅವರು ಪ್ರಥಮ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಸಂದರ್ಭ ಗ್ರಾಮಪಂಚಾಯತ್‌ಗಳಿಗೆ ಉಚಿತವಾಗಿ ಕಲರ್ ಟಿವಿ ಸೆಟ್‌ಗಳನ್ನು ಒದಗಿಸಲಾಗಿತ್ತು. ಕಲರ್ ಟಿವಿ ಖರೀದಿ ಸಂದರ್ಭ ಭಾರೀ ಭ್ರಷ್ಟಾಚಾರ ನಡೆದಿತ್ತು ಎಂದು ದೂರಿ ಅಂದಿನ ಸಚಿವ ಟಿ.ಎಂ.ಸೆಲ್ವಗಣಪತಿ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೆಳನ್ಯಾಯಾಲಯ 2009ರಲ್ಲಿ ಆರೋಪವನ್ನು ತಳ್ಳಿಹಾಕಿತ್ತು.
ಇದನ್ನು ಪ್ರಶ್ನಿಸಿ ಸಿಬಿಐ ಮದ್ರಾಸ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಜಯಚಂದ್ರನ್, ತಮ್ಮ ವಾದವನ್ನು ಸಮರ್ಥಿಸಲು ಪೂರಕವಾದ ಅಂಶಗಳನ್ನು ಒದಗಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.





