ಕರಡು ಎನ್‌ಸಿಆರ್‌ನಲ್ಲಿ ಒಂದೇ ಕುಟುಂಬದ ಇತರ ಸದಸ್ಯರ ಹೆಸರುಗಳು ಮಾಯ...!
ಗುವಾಹಟಿ,ಜು.31: ಸೋಮವಾರ ಅಸ್ಸಾಮಿನಲ್ಲಿ ಬಿಡುಗಡೆಗೊಳಿಸಲಾದ ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌ನ ಅಂತಿಮ ಕರಡಿನಲ್ಲಿ ಒಂದೇ ಕುಟುಂಬದ ಕೆಲವರ ಹೆಸರುಗಳು ಸೇರ್ಪಡೆಗೊಂಡಿರುವುದು ಮತ್ತು ಇತರರ ಹೆಸರುಗಳು ಇಲ್ಲದಿರುವುದು ಅತಂತ್ರಗೊಳ್ಳುವ ಭೀತಿಯಲ್ಲಿರುವ ಸುಮಾರು 40 ಲಕ್ಷಕ್ಕೂ ಅಧಿಕ ಅರ್ಜಿದಾರರ ಪೈಕಿ ಹಲವರ ಕಳವಳಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಪೌರತ್ವದ ಪುರಾವೆಯಾಗಿ ತಮ್ಮ ಕುಟುಂಬದ ಇತರ ಸದಸ್ಯರು ಸಲ್ಲಿಸಿದ್ದ ದಾಖಲೆಗಳನ್ನೇ ತಾವೂ ಸಲ್ಲಿಸಿದ್ದೆವು,ಆದರೂ ತಮ್ಮನ್ನು ಪಟ್ಟಿಯಿಂದ ಹೊರಗಿರಿಸಲಾಗಿದೆ ಎಂದು ಹಲವರು ಬೆಟ್ಟು ಮಾಡಿದ್ದಾರೆ.
ಕರಡು ಪಟ್ಟಿಯಲ್ಲಿ ಹೆಸರುಗಳಿಲ್ಲದ ಬರಾಕ್ ವ್ಯಾಲಿ ಪ್ರದೇಶದ ಗಣ್ಯರಲ್ಲಿ ಬಿಜೆಪಿ ಶಾಸಕ ದಿಲೀಪ ಪಾಲ್ ಅವರ ಪತ್ನಿ ಅರ್ಚನಾ ಪಾಲ್,ಮಾಜಿ ಕಾಂಗ್ರೆಸ್ ಶಾಸಕ ಅತಾವುರ್ ರಹಮಾನ್ ಮಝರ್ಭುಹಿಯಾ ಮತ್ತು ಎಐಯುಡಿಎಫ್ ಕಾಚಾರ್ ಘಟಕಾಧ್ಯಕ್ಷ ಸಮೀಯುಲ್ ಇಸ್ಲಾಂ ಮತ್ತವರ ಕುಟುಂಬ ಸೇರಿದ್ದಾರೆ.
ಇದು ಅಂತಿಮ ಪಟ್ಟಿಯಲ್ಲ,ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ನನ್ನ ಪತ್ನಿಯ ಹೆಸರೂ ಪಟ್ಟಿಯಲ್ಲಿಲ್ಲ ಮತ್ತು ಅವರು ತನ್ನ ಹಕ್ಕನ್ನು ಸಲ್ಲಿಸಲಿದ್ದಾರೆ. ಅಂತಿಮ ಎನ್‌ಆರ್‌ಸಿಗಾಗಿ ನಾವು ಕಾಯಲೇಬೇಕು ಎಂದು ಪಾಲ್ ಹೇಳಿದರು.
ಹಕ್ಕುಗಳು ಮತ್ತು ಆಕ್ಷೇಪಗಳನ್ನು ಸಲ್ಲಿಸಿ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಸಾಧ್ಯ ಎನ್ನುವುದು ನಿಜವಿದ್ದರೂ ಕುಟುಂಬದ ಕೆಲವು ಸದಸ್ಯರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಟ್ಟಿದ್ದು ಅತ್ಯಂತ ಅನ್ಯಾಯವಾಗಿದೆ ಮತ್ತು ಈ ಎನ್‌ಆರ್‌ಸಿ ಪ್ರಕ್ರಿಯೆಯು ಬಡವರಿಗೆ ತೀವ್ರ ಕಿರುಕುಳಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಶಾಸಕ(ಕರೀಮ್‌ಗಂಜ್-ಉ) ಕಮಲಾಖ್ಯ ಡೇ ಪುರಕಾಯಸ್ಥ ಹೇಳಿದರು.
ಬಿಲಾಸಪುರ ಮೂಲದ ಸೈರಾ ಬೇಗಂ ಗುವಾಹಟಿಯಲ್ಲಿ ಮನೆಗೆಲಸದಾಳು ಆಗಿ ದುಡಿಯುತ್ತಿದ್ದು,ಆಕೆಯ ಮತ್ತು ಪುತ್ರಿಯ ಹೆಸರು ಪಟ್ಟಿಯಲ್ಲಿವೆ. ಆದರೆ ಅರ್ಜಿಯಲ್ಲಿ ಕುಟುಂಬದ ಮುಖ್ಯಸ್ಥನೆಂದು ಘೋಷಿಸಲಾಗಿದ್ದ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಹೆಸರುಗಳು ಮಾಯವಾಗಿವೆ.
ನಾವೆಲ್ಲರೂ ಒಂದೇ ರೀತಿಯ ದಾಖಲೆಗಳನ್ನು ಸಲ್ಲಿಸಿದ್ದೆವು. ವಾಸ್ತವದಲ್ಲಿ ನಾನು ನನ್ನ ಪತಿಯನ್ನು ಮದುವೆಯಾಗಿದ್ದನ್ನೂ ರುಜುವಾತುಗೊಳಿಸಬೇಕಿತ್ತು ಎಂದು ಬೇಗಂ ಹೇಳಿದರು.
ಕನಿಷ್ಠ ಪಕ್ಷ,ಯಾವುದೇ ಶಂಕೆಗಳಿಲ್ಲದ ಹೆಸರುಗಳನ್ನು ಪಟ್ಟಿಯಿಂದ ಬಿಡಬಾರದಿತ್ತು ಎಂದು ಕಾಂಗ್ರೆಸ್ ನಾಯಕಿ ಬಬಿತಾ ಶರ್ಮಾ ಹೇಳಿದರು.
ಅಂತಿಮ ಪಟ್ಟಿಯಲ್ಲಿ ತನ್ನಿಬ್ಬರು ಹಿರಿಯ ಸಹೋದರರ ಹೆಸರುಗಳನ್ನು ಸೇರಿಸಲಾಗಿದೆ,ಆದರೆ ಅವರ ಪತ್ನಿಯರು ಮತ್ತು ಪುತ್ರರ ಹೆಸರುಗಳು ನಾಪತ್ತೆಯಾಗಿವೆ ಎಂದು ಕಾಟನ್ ಸ್ಟೇಟ್ ವಿವಿಯ ಬಂಗಾಳಿ ವಿಭಾಗದ ಮುಖ್ಯಸ್ಥ ಪ್ರಶಾಂತ ಚಕ್ರವರ್ತಿ ತಿಳಿಸಿದರು.







