ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಪೌರತ್ವ ವಿವಾದ ಎನ್‌ಆರ್‌ಸಿಗೆ ನಾಂದಿ ಹಾಡಿದ್ದೇ ರಾಜೀವ್ ಎಂದ ಶಾ

ಹೊಸದಿಲ್ಲಿ,ಜು.31: ಅಸ್ಸಾಮಿನ ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್‌ಆರ್‌ಸಿ)ನ ಪರಿಷ್ಕೃತ ಕರಡು ಅಸ್ಸಾಂ ಒಪ್ಪಂದಕ್ಕೆ ಅನುಗುಣವಾಗಿದೆ. ಒಪ್ಪಂದಕ್ಕೆ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಸಹಿ ಹಾಕಿದ್ದರು ಮತ್ತು ಎನ್‌ಆರ್‌ಸಿ ಅವರೇ ಆರಂಭಿಸಿದ್ದ ಉಪಕ್ರಮವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಕೋಲಾಹಲದ ನಡುವೆಯೇ ಹೇಳಿದರು.
40 ಲಕ್ಷ ಜನರನ್ನು ಅತಂತ್ರಗೊಳ್ಳುವ ಭೀತಿಗೆ ತಳ್ಳಿರುವ ಎನ್‌ಆರ್‌ಸಿ ಕರಡಿನ ಕುರಿತಂತೆ ಪ್ರತಿಪಕ್ಷಗಳ ಸಿಟ್ಟು ಮಂಗಳವಾರ ಸಂಸತ್ ಕಲಾಪಗಳನ್ನು ನುಂಗಿದೆ. ತಾತ್ಕಾಲಿಕ ಮುಂದೂಡಿಕೆಯ ಬಳಿಕ ರಾಜ್ಯಸಭೆಯು ಮರುಸಮಾವೇಶಗೊಂಡಾಗ ಶಾ ಅವರು ಮಾತನಾಡಲು ಮಂದಾದಾಗ ಸದನದಲ್ಲಿ ಕೋಲಾಹಲ ಆರಂಭಗೊಂಡಿತು. ನಿಮಿಷಗಳ ಬಳಿಕ ಸದನವು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.
ದಿನದ ಕಲಾಪಗಳನ್ನು ರದ್ದುಗೊಳಿಸುವಂತೆ ಮತ್ತು ಪೌರತ್ವ ಪಟ್ಟಿಯ ಕುರಿತು ಚರ್ಚಿಸುವಂತೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನೋಟಿಸ್‌ಗಳನ್ನು ನೀಡಿದ್ದರಿಂದ ಅತ್ತ ಲೋಕಸಭೆಯೂ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಪೌರತ್ವ ವಿಷಯವು ಜನರ ಬದುಕಿನ ಮೇಲೆ ಮಾತ್ರವಲ್ಲ, ನೆರೆರಾಷ್ಟ್ರಗಳೊಂದಿಗೆ, ವಿಶೇಷವಾಗಿ ಬಾಂಗ್ಲಾದೇಶದೊಂದಿಗಿನ ಸಂಬಂಧದ ಮೇಲೂ ಪರಿಣಾಮವನ್ನುಂಟು ಮಾಡುವುದರಿಂದ ಸರ್ವಪಕ್ಷ ಸಭೆಯನ್ನು ಕರೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಸೋಮವಾರವೂ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದಾಗ ರಾಜ್ಯಸಭೆಯ ಕಲಾಪಗಳನ್ನು ಅನಿವಾರ್ಯವಾಗಿ ಅಪರಾಹ್ನ ಒಂದು ಗಂಟೆಯವರೆಗೆ ಮುಂದೂಡಲಾಗಿತ್ತು. ಸದನವು ಮರುಸಮಾವೇಶಗೊಂಡ ಬಳಿಕ ಪ್ರತಿಭಟನೆಗಳು ಮತ್ತೆ ಭುಗಿಲೆದ್ದದ್ದು,ದಿನದ ಮಟ್ಟಿಗೆ ಮುಂದೂಡಲಾಯಿತು.
ಯಪಿಎಗೆ ಮಾಡಲು ಸಾಧ್ಯವಾಗದಿದ್ದನ್ನು ಎನ್‌ಡಿಎ ಸರಕಾರವು ಮಾಡಿದೆ. ಎನ್‌ಸಿಆರ್ ಅಸ್ಸಾಮಿನಲ್ಲಿಯ ಅಕ್ರಮ ವಲಸಿಗರನ್ನು ಗುರುತಿಸಲು ಮತ್ತು ಭಾರತೀಯ ಪ್ರಜೆಗಳ ಪಟ್ಟಿಯನ್ನು ಸಿದ್ಧಗೊಳಿಸಲು ಬಯಸಿದ್ದ 1985ರ ಅಸ್ಸಾಂ ಒಪ್ಪಂದಕ್ಕೆ ಅನುಗುಣವಾಗಿದೆ. ರಾಜೀವ ಗಾಂಧಿಯವರು ಒಪ್ಪಂದಕ್ಕೆ ಸಹಿ ಮಾಡಿದ್ದು,ಇದು ಕಾಂಗ್ರೆಸ್ ಪ್ರಧಾನಿಯ ಉಪಕ್ರಮವಾಗಿತ್ತು. ಅವರಿಗೆ(ರಾಜೀವ) ಅದನ್ನು ಮಾಡುವ ಧೈರ್ಯವಿರಲಿಲ್ಲ. ನಮಗೆ ಆ ಧೈರ್ಯವಿದೆ ಮತ್ತು ನಾವು ಅದನ್ನು ಮಾಡುತ್ತಿದ್ದೇವೆ. ನೀವು (ಪ್ರತಿಪಕ್ಷ) ಅಕ್ರಮ ವಲಸಿಗ ಬಾಂಗ್ಲಾದೇಶಿಗಳನ್ನು ರಕ್ಷಿಸಲು ಬಯಸಿದ್ದೀರಿ ಎಂದು ಶಾ ಹೇಳಿದರು.
ಸರಕಾರವು ಆರು ತಿಂಗಳ ಹಿಂದೆ 2.4 ಲಕ್ಷ ಜನರನ್ನು ಶಂಕಾಸ್ಪದ ಮತದಾರರೆಂದು ಪಟ್ಟಿ ಮಾಡಿತ್ತು ಎಂದು ಹೇಳಿದ ಟಿಸಿ ಸದಸ್ಯ ಸುಖೇಂದು ರಾಯ್ ಅವರು,ಇದೆಲ್ಲವೂ ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ಎಂದು ಅವರು ಹೇಳುತ್ತಿರುವುದೆಲ್ಲ ಶುದ್ಧ ಸುಳ್ಳು. ನಾವು ಇದರಲ್ಲಿ ಮಾನವ ಹಕ್ಕುಗಳನ್ನೂ ತೊಡಗಿಸಿಕೊಳ್ಳಬೇಕು ಎಂದರು.
ಗೃಹಸಚಿವ ರಾಜನಾಥ ಸಿಂಗ್ ಅವರು ಲೋಕಸಭೆಯಲ್ಲಿನ ತನ್ನ ಕರ್ತವ್ಯಗಳನ್ನು ಮುಗಿಸಿದ ನಂತರ ಸದನಕ್ಕೆ ಬರಲಿದ್ದಾರೆ ಮತ್ತು ‘ಸೂಕ್ಷ್ಮ ಹಾಗೂ ಗಂಭೀರ’ವಿಷಯದ ಮೇಲೆ ಉತ್ತರವನ್ನು ನೀಡಲಿದ್ದಾರೆ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು.
ಎನ್‌ಆರ್‌ಸಿಯು ಗಂಭೀರವಾದ ಸಮಸ್ಯೆಯಾಗಿದ್ದು ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ನಿಜವಾದ ಭಾರತೀಯ ಪ್ರಜೆಗಳಿಗೆ ಅನ್ಯಾಯವಾಗಬಾರದು ಎಂದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ಈ ವಿಷಯದ ಬಗ್ಗೆ ತನ್ನ ಪಕ್ಷವು ಸರಕಾರದೊಂದಿಗೆ ಚರ್ಚಿಸಲಿದೆ ಎಂದು ಭರವಸೆ ನೀಡಿದರು.







