ವಿದ್ಯಾರ್ಥಿ ಸಮುದಾಯವನ್ನು ಕಾಂಗ್ರೆಸ್‌ನತ್ತ ಸೆಳೆಯಬೇಕು: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.1: ದೇಶದಲ್ಲಿ ವಿದ್ಯಾರ್ಥಿ ಸಮುದಾಯವೆ ದೊಡ್ಡಶಕ್ತಿ. ಹೀಗಾಗಿ ವಿದ್ಯಾರ್ಥಿಗಳನ್ನು ಕಾಂಗ್ರೆಸ್ ತತ್ವ ಸಿದ್ಧಾಂತದತ್ತ ಆಕರ್ಷಿಸುವಂತೆ ಎನ್‌ಎಸ್‌ಯುಐ(ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ)ನ ಮುಖಂಡರು ವಿಶೇಷ ಆಸಕ್ತಿ ವಹಿಸಬೇಕೆಂದು ಉನ್ನತ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಗರದ ಕೆಇಬಿ ಎಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸ್ಫೂರ್ತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಸೇರಿದಂತೆ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ಹಲವು ಮಂದಿ ವಿದ್ಯಾರ್ಥಿ ದೆಸೆಯಲ್ಲಿಯೆ ಕಾಂಗ್ರೆಸ್‌ಗೆ ಬಂದವರು. ವಿದ್ಯಾರ್ಥಿ ದೆಸೆಯಲ್ಲಿ ಕಾಂಗ್ರೆಸ್‌ನತ್ತ ಆಕರ್ಷಿತಗೊಂಡ ಯಾವೊಬ್ಬ ಸದಸ್ಯನೂ ಕಾಂಗ್ರೆಸನ್ನು ಬಿಡುವುದಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ತನ್ನ ಬದುಕನ್ನು ಕಾಂಗ್ರೆಸ್‌ಗಾಗಿ ಬದುಕುತ್ತಾನೆ. ಆದರೆ, ಈಗಿನ ವಿದ್ಯಾರ್ಥಿ ಕಾಂಗ್ರೆಸ್ ಘಟಕ(ಎನ್‌ಎಸ್‌ಯುಐ)ದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಇದನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರು ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ನಾನು ಮೊದಲಿಗೆ ಕಾಂಗ್ರೆಸ್ ಕಾರ್ಯಕರ್ತ. ನಂತರ, ಶಾಸಕ, ಸಚಿವನೆಂದು ಹೇಳಿಕೊಳ್ಳುತ್ತೇನೆ. ಸಚಿವ, ಶಾಸಕ ಸ್ಥಾನವೆಂಬುದು ತಾತ್ಕಾಲಿಕ. ಆದರೆ, ಕಾಂಗ್ರೆಸ್ ಕಾರ್ಯಕರ್ತನ ಸ್ಥಾನ ಖಾಯಂ. ಹೀಗಾಗಿ ಪಕ್ಷದ ಕಾರ್ಯಕರ್ತರೆ ಕಾಂಗ್ರೆಸ್ ಆಸ್ತಿಯಾಗಿದ್ದು, ಅವರ ಅಭಿಪ್ರಾಯವೆ ಹೈಕಮಾಂಡ್‌ನ ಅಭಿಪ್ರಾಯವಾಗಬೇಕೆಂದು ಅವರು ಹೇಳಿದರು.
ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ: ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರನ್ನು ಗುರುತಿಸಬೇಕು. ಹಾಗೂ ಅವರ ಶ್ರಮಕ್ಕೆ ತಕ್ಕ ರೀತಿಯಲ್ಲಿ ಇಲಾಖೆಗಳಲ್ಲಿ, ಸಮಿತಿಗಳಲ್ಲಿ, ಸಂಸ್ಥೆಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಲು ಗಂಭೀರವಾಗಿ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಹೈ-ಕಮಾಂಡ್ ಎಲ್ಲ ನಾಯಕರನ್ನು ಗಂಭೀರವಾಗಿ ಪರಿಶೀಲಿಸುತ್ತಿರುತ್ತದೆ. ಯಾರಿಗೆ ಅಧಿಕಾರ ಸಿಕ್ಕಿದೆ. ಯಾರು ವಂಚಿತರು ಎಂಬುದನ್ನು ಗಮನಿಸಿ ಸೂಕ್ತ ಸ್ಥಾನಮಾನ ನೀಡುತ್ತದೆ. ಧರ್ಮಸಿಂಗ್ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗೂ ಸಿದ್ದರಾಮಯ್ಯ ಸರಕಾರದಲ್ಲಿ ಏಳು ತಿಂಗಳು ಸಚಿವನಾಗಿರಲಿಲ್ಲ. ಆದರೂ ನಾನು ಬಹಿರಂಗವಾಗಿ ಯಾವ ಹೇಳಿಕೆಯನ್ನು ಕೊಟ್ಟಿಲ್ಲ. ಪಕ್ಷದ ಒಳಗಡೆ ನಾನು ಮನವಿ ಸಲ್ಲಿಸಿದ್ದೆ. ಆ ನಂತರದಲ್ಲಿ ಸಚಿವ ಸ್ಥಾನ ಸಿಕ್ಕಿತು.
-ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವ







