ಹೆಚ್ಚುವರಿ ರಾಜಧಾನಿ ಸೃಷ್ಟಿಯಿಂದ ಪ್ರಯೋಜನವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಆ.1: ಸಮಗ್ರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೇ ಹೊರತು ಹೆಚ್ಚುವರಿ ರಾಜಧಾನಿ ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಆರ್ಥಿಕ ಸಬಲೀಕರಣ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಅದರ ಬದಲಾಗಿ ಹೊಸ ರಾಜಧಾನಿ ನಿರ್ಮಿಸುವುದರಿಂದ ಪ್ರಯೋಜನವಿಲ್ಲ. ಇಂತಹ ಚರ್ಚೆ ಅಪ್ರಸ್ತುತ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ ಏಕೀಕರಣ ಹೋರಾಟ ಆರಂಭವಾದ ಪ್ರಾಂತ್ಯದಲ್ಲೇ ಪ್ರತ್ಯೇಕ ರಾಜ್ಯದ ಹೋರಾಟವು ಸರಿಯಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಮುಂದಿಟ್ಟವರಿಗೆ ಏಕೀಕರಣ ಹೋರಾಟದ ತಿಳುವಳಿಕೆ ಇಲ್ಲ. ಚಾಮರಾಜನಗರದಿಂದ ಬೀದರ್‌ವರೆಗೂ ರಾಜ್ಯದ ಪ್ರತಿ ಪ್ರದೇಶವೂ ಅಭಿವೃದ್ಧಿಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆರ್ಥಿಕವಾಗಿಯೂ ಇದು ಕಾರ್ಯಸಾಧುವಲ್ಲ. ಅದರ ಬದಲಾಗಿ ಅಭಿವೃದ್ಧಿ ವಿಷಯದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಸಾಂವಿಧಾನಿಕ ಹಕ್ಕುಗಳಿವೆ. ಆದರೆ, ಬಿಜೆಪಿಯವರು ರಾಜಕೀಯ ಗಿಮಿಕ್‌ಗಾಗಿ ಪ್ರತ್ಯೇಕತೆ ಹೋರಾಟ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಾಧ್ಯವಿಲ್ಲ ಎಂದಿದ್ದ ಬಿಜೆಪಿಯವರು ಇದೀಗ ಪ್ರತ್ಯೇಕತೆ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದಾರೆ. ಆದರೆ, ರಾಜ್ಯ ಸರಕಾರ ಬಜೆಟ್‌ನಲ್ಲಿ 1,500ಕೋಟಿ ರೂ.ಮೀಸಲಿಟ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.







