ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬಗ್ಗೆ ಅಸಮಾಧಾನವಿದ್ದರೆ ಸಿಎಂ ಜೊತೆ ಚರ್ಚೆ: ಡಾ.ಪರಮೇಶ್ವರ್

ಬೆಂಗಳೂರು, ಆ. 1: ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯ ಸಂಬಂಧ ಅಸಮಾಧಾನವಿದ್ದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಚಿವರ ನೇಮಕಾತಿ ವಿಷಯದಲ್ಲಿ ಈ ಮೊದಲೇ ಚರ್ಚೆ ನಡೆಸಲಾಗಿತ್ತು. ನೇಮಕಾತಿ ನಂತರ ಯಾರಿಗಾದರೂ ಅಸಮಾಧಾನವಿದ್ದರೆ ಮತ್ತೊಮ್ಮೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಮಾತುಕತೆಗೆ ನಮ್ಮಲ್ಲಿ ಅವಕಾಶವಿದೆ ಎಂದರು.
ವಿಶೇಷ ಏನೂ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಔತಣಕೂಟ ಏರ್ಪಡಿಸಿರುವುದರಲ್ಲಿ ವಿಶೇಷವೇನೂ ಇಲ್ಲ. ನಾವೆಲ್ಲ ಒಟ್ಟಿಗೆ ಸೇರಿ ಊಟ ಮಾಡುತ್ತೇವೆ. ಊಟದ ಮೆನು ಏನು ಎಂದು ಇನ್ನೂ ಗೊತ್ತಿಲ್ಲ ಎಂದು ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಹಾಸ್ಯ ಚಟಾಕಿ ಹಾರಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಸಂಬಂಧ ಯಾವುದೇ ಅಸಮಾಧಾನ ಇಲ್ಲ. ಆದರೂ, ಮಾಧ್ಯಮಗಳು ಈ ಬಗ್ಗೆ ಅನಗತ್ಯವಾಗಿ ಅಸಮಾಧಾನವಿದೆ ಎಂದು ಹೇಳುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಎಲ್ಲವೂ ಉತ್ತಮವಾಗಿದೆ’
-ವೆಂಕಟರಮಣಪ್ಪ ಕಾರ್ಮಿಕ ಸಚಿವ







