ಟ್ರಂಪ್‌ರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಇರಾನ್

ಟೆಹರಾನ್, ಆ. 1: ಯಾವುದೇ ಪೂರ್ವ ಶರತ್ತು ಇಲ್ಲದೆ ಮಾತುಕತೆಗಳನ್ನು ನಡೆಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಸ್ತಾಪವನ್ನು ಇರಾನ್‌ನ ಹಿರಿಯ ಅಧಿಕಾರಿಗಳು ಮಂಗಳವಾರ ತಿರಸ್ಕರಿಸಿದ್ದಾರೆ.
ಪರಮಾಣು ಒಪ್ಪಂದದಿಂದ ಹಿಂದೆ ಸರಿದಿದ್ದೂ ಅಲ್ಲದೆ ಇರಾನ್ ವಿರುದ್ಧ ಮತ್ತೆ ದಿಗ್ಬಂಧನಗಳನ್ನು ಹೇರಲು ಅಮೆರಿಕ ಮುಂದಾಗಿರುವ ಹಿನ್ನೆಲೆಯಲ್ಲಿ, ಈ ಪ್ರಸ್ತಾಪಕ್ಕೆ ಯಾವುದೇ ಅರ್ಥವಿಲ್ಲ ಹಾಗೂ ಅದು ‘ಅಪಮಾನಕಾರಿ’ಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದೇ ವೇಳೆ, 2015ರ ಇರಾನ್ ಪರಮಾಣು ಒಪ್ಪಂದವನ್ನು ಟ್ರಂಪ್ ತ್ಯಜಿಸಿರುವುದು ಕಾನೂನುಬಾಹಿರವಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ ಹಾಗೂ ಇರಾನ್‌ನ ತೈಲ ರಫ್ತುಗಳನ್ನು ನಿಲ್ಲಿಸಲು ವಾಶಿಂಗ್ಟನ್ ನಡೆಸುತ್ತಿರುವ ಪ್ರಯತ್ನಗಳಿಗೆ ಇರಾನ್ ಸುಲಭವಾಗಿ ತಲೆಬಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇರಾನ್‌ನೊಂದಿಗೆ 6 ಜಾಗತಿಕ ಪ್ರಬಲ ರಾಷ್ಟ್ರಗಳು 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದವು ಏಕಪಕ್ಷೀಯವಾಗಿ ಇರಾನ್ ಪರವಾಗಿದೆ ಎಂಬುದಾಗಿ ಟ್ರಂಪ್ ಬಣ್ಣಿಸಿದ್ದರು ಹಾಗೂ ಅಂತಿಮವಾಗಿ ಮೇ ತಿಂಗಳಲ್ಲಿ ಒಪ್ಪಂದದಿಂದ ಹಿಂದೆ ಸರಿದಿದ್ದರು.
ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಯಾವ ರೀತಿಯಲ್ಲಿ ಸುಧಾರಿಸಬಹುದು ಎಂಬ ಬಗ್ಗೆ ಚರ್ಚಿಸಲು ಇರಾನ್ ಜೊತೆ ಮಾತುಕತೆ ನಡೆಸಲು ತಾನು ಸಿದ್ಧ ಎಂಬುದಾಗಿ ಸೋಮವಾರ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
‘‘ಟೆಹರಾನ್‌ನೊಂದಿಗೆ ಮಾತುಕತೆ ನಡೆಸುವ ಟ್ರಂಪ್‌ರ ಪ್ರಸ್ತಾಪ ಅವರ ಕೃತ್ಯಗಳಿಗೆ ವಿರುದ್ಧವಾಗಿದೆ. ಅವರು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದೂ ಅಲ್ಲದೆ, ಇರಾನ್‌ನೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸುವಂತೆ ಇತರ ದೇಶಗಳನ್ನು ಒತ್ತಾಯಿಸುತ್ತಿದ್ದಾರೆ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರರು ಹೇಳಿದರು.







