ಸಾಹಿತಿ ನಿರಂಜನರ ಚಿಂತನೆ ಯುವ ಸಮುದಾಯಕ್ಕೆ ತಲುಪಲಿ: ಲೇಖಕಿ ಟಿ.ಸಿ.ಪೂರ್ಣಿಮಾ

ಬೆಂಗಳೂರು, ಆ.1: ನಾಡಿನ ಪ್ರಗತಿಪರ ಚಿಂತನೆಯ ಹರಿಕಾರ ಹಾಗೂ ಹಿರಿಯ ಸಾಹಿತಿ ನಿರಂಜನರವರ ಸಾಹಿತ್ಯ-ಚಿಂತನೆಯನ್ನು ಯುವ ಸಮುದಾಯಕ್ಕೆ ತಲುಪಿಸುವ ಅಗತ್ಯವಿದೆ ಎಂದು ಲೇಖಕಿ ಟಿ.ಸಿ.ಪೂರ್ಣಿಮಾ ಆಶಿಸಿದರು.
ಬುಧವಾರ ದೆಹಲಿ ಕರ್ನಾಟಕ ಸಂಘ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ವಸಂತ ಶೆಟ್ಟಿ ಬೆಳ್ಳಾರೆ ಸಂಪಾಧಿತ ‘ನಿರಂಜನ ಕೃತಿ ಸ್ಮತಿ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರಂಜನರವರ ಸಾಹಿತ್ಯ ಕೃತಿಗಳು ಯುವ ತಲೆಮಾರಿಗೆ ಪರಿಚಯವಿಲ್ಲ. ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃತಿಗಳ ಹಾಗೂ ಚಿಂತನೆಗಳ ಕುರಿತು ಚರ್ಚೆಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು. ದೆಹಲಿ ಕರ್ನಾಟಕ ಸಂಘ ಒಂದು ವರ್ಷದ ಹಿಂದೆ ಸಾಹಿತಿ ನಿರಂಜನರವರ ಬದುಕು ಬರಹಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಆ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮೂಲಕ ನನ್ನೊಳಗೆ ಪ್ರಗತಿಪರ ಚಿಂತನೆಗಳು ಮೂಡಲು ನಿರಂಜನ ಸಾಹಿತ್ಯ ಕಾರಣವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ಕನ್ನಡ ನಾಡಿನಲ್ಲಿ ಹಲವು ಮಂದಿ ಪ್ರತಿಭಾವಂತ ಸಾಹಿತಿ ಹಾಗೂ ಕಲಾವಿದರಿದ್ದಾರೆ. ಅವರನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ದೆಹಲಿ ಕನ್ನಡ ಸಂಘ ವಿಶೇಷ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಇದರ ಸಲುವಾಗಿ ಯುವ ಸಾಹಿತಿಗಳ ಪುಸ್ತಕ ಪ್ರಕಟನೆ ಹಾಗೂ ಶಿವರಾಮ ಕಾರಂತ ಪ್ರಶಸ್ತಿ, ಸರೋಜಿ ಮಹಿಷಿ ಪ್ರಶಸ್ತಿ ಹಾಗೂ ಕನ್ನಡ ಭಾರತಿ ರಂಗ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿರುವ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪಿಸಬೇಕೆಂದು ದೆಹಲಿ ಕನ್ನಡ ಸಂಘ ನಿರಂತರವಾಗಿ ಹೋರಾಟ ಮಾಡಿತ್ತು. ಹಾಗೂ ಜನಪದ ತಜ್ಞ ಪುರುಷೋತ್ತಮ ಬಿಳಿಮಲೆ ಸಂಘಕ್ಕೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಸಲುವಾಗಿ ಕೇಂದ್ರ ಸರಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿತ್ತು ಎಂದು ಅವರು ಹೇಳಿದರು.
ನಾಡಿನಲ್ಲಿ ಕುವೆಂಪು, ಶಿವರಾಮಕಾರಂತ, ದಾ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಲಿನಲ್ಲಿ ನಿಲ್ಲುವಂತಹ ಹಲವು ಸಾಹಿತಿಗಳು ನಾಡಿನಲ್ಲಿ ಇದ್ದಾರೆ. ಆದರೆ, ಅಂತಹ ಸಾಹಿತಿಗಳ ಸಾಹಿತ್ಯದ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಹೀಗಾಗಿ ನಿರಂಜನರ ಸಾಹಿತ್ಯದ ಕುರಿತು ಕಳೆದ ಒಂದು ವರ್ಷದ ವಿಚಾರ ಸಂಕಿರಣವನ್ನು ಆಯೋಜಿಸಿದ್ದೆವು. ಈಗ ಅದನ್ನು ಪುಸ್ತಕ ರೂಪಕ್ಕೆ ತರುತ್ತಿದ್ದೇವೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ವಿಜಯಶಂಕರ್, ದೆಹಲಿ ಕನ್ನಡ ಸಂಘದ ಕಾರ್ಯದರ್ಶಿ ಸಿ.ಎಂ.ನಾಗರಾಜ ಮತ್ತಿತರರಿದ್ದರು.
ದೇಶದ ಮೊದಲ ಸ್ವಾತಂತ್ರ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ಸ್ಥಾಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲು ದೆಹಲಿ ಕರ್ನಾಟಕ ಸಂಘ ತಿರ್ಮಾನಿಸಿದೆ. ಇದಕ್ಕೆ ನಾಡಿನ ಹಿರಿಯ ಸಾಹಿತಿಗಳು, ಜನಪ್ರತಿನಿಧಿಗಳು ಸಹಕರಿಸಬೇಕು.
-ವಸಂತ ಶೆಟ್ಟಿ ಬೆಳ್ಳಾರೆ ಅಧ್ಯಕ್ಷ, ದೆಹಲಿ ಕರ್ನಾಟಕ ಸಂಘ







