ನಗರದಾದ್ಯಂತ 5 ಸಾವಿರ ಫ್ಲೆಕ್ಸ್ ತೆರವು: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

ಬೆಂಗಳೂರು, ಆ.1: ನಗರದಾದ್ಯಂತ 5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.
ನಗರವನ್ನೇ ವ್ಯಾಪಿಸಿಕೊಂಡಿರುವ ಫ್ಲೆಕ್ಸ್‌ಗಳ ತೆರವಿಗೆ ಬೆಳಗ್ಗೆಯಷ್ಟೇ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಮಧ್ಯಾಹ್ನದೊಳಗೆ ಎಲ್ಲ ಫ್ಲೆಕ್ಸ್‌ಗಳ ತೆರವಿಗೆ ಆದೇಶಿಸಿತ್ತು. ಮಧ್ಯಾಹ್ನ ಪ್ರಕರಣ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ಮಧ್ಯಾಹ್ನದ ವೇಳೆಗೆ 5 ಸಾವಿರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ಹಾಗಾದರೆ ಉಳಿದವುಗಳನ್ನು ರಾತ್ರಿಯೊಳಗೆ ತೆರವುಗೊಳಿಸುತ್ತೀರಾ ಎಂದು ಪ್ರಶ್ನಿಸಿದರು. ಈ ಮಧ್ಯೆ ನಾವು ಅಧಿಕೃತವಾಗಿ ಪರವಾನಗಿ ಪಡೆದು ಹಾಕಲಾಗಿರುವ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಲಾಗುತ್ತಿದೆ ಎಂದು ದೂರಿ ತೆರವು ಪ್ರತಿಕ್ರಿಯೆ ಸ್ಥಗಿತಕ್ಕೆ ಜಾಹೀರಾತುದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ ನಿಮ್ಮದು ಅಧಿಕೃತವೋ ಅನಧಿಕೃತವೋ ಆಮೇಲೆ ನಿರ್ಧರಿಸೋಣ. ಮೊದಲು ಬೆಂಗಳೂರಿನ ವೈಭವ ಮರುಕಳಿಸಲಿ. ನೀವು ಪರವಾನಗಿ ಪಡೆದು ಅಧಿಕೃತವಾಗಿಯೇ ಫ್ಲೆಕ್ಸ್‌ಗಳನ್ನು ಹಾಕಿದ್ದರೆ ಅವುಗಳನ್ನು ಪುನಃ ತೂಗುಹಾಕುವ ಬಗ್ಗೆ ನಂತರ ನಿರ್ಧರಿಸೋಣ ಎಂದರು.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ಇದೊಂದು ತೊಂದರೆದಾಯಕ ವಿಚಾರ. ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಲೇಬೇಕು. ಇದು ಕೇವಲ ಇಂದು ತೆರವು ಮಾಡಿ ಪುನಃ ನಾಳೆ ಹಾಕುವುದಲ್ಲ. ಇದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಒಂದು ನೀತಿ ರೂಪಿಸಬೇಕು. ಆ ನೀತಿ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ ಎಂದು ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿಚಾರಣೆ ವೇಳೆ ಹಾಜರಿದ್ದರು.







