ಭಾರತವನ್ನು ಪ್ರವೇಶಿಸುವ ಮುಸ್ಲಿಮರು ನಿರಾಶ್ರಿತರಲ್ಲ: ಪೌರತ್ವ ವಿವಾದ ಕುರಿತು ತ್ರಿಪುರಾ ರಾಜ್ಯಪಾಲರ ಹೇಳಿಕೆ

ಅಗರ್ತಲಾ,ಆ.1: ತಮ್ಮ ಧಾರ್ಮಿಕ,ಜನಾಂಗೀಯ ಮತ್ತು ರಾಜಕೀಯ ನಂಬಿಕೆಗಳಿಂದಾಗಿ ಹಿಂಸೆ,ಕಿರುಕುಳದ ಪ್ರಾಮಾಣಿಕವಾದ ಭೀತಿಯಿಂದ ತಮ್ಮ ದೇಶಗಳಿಂದ ಪರಾರಿಯಾಗುವವರು ನಿರಾಶ್ರಿತರಾಗಿದ್ದು,ಉದ್ಯೋಗ ಅಥವಾ ಆರ್ಥಿಕ ಅವಕಾಶಗಳನ್ನು ಹುಡುಕಿಕೊಳ್ಳಲು ಇನ್ನೊಂದು ದೇಶವನ್ನು ಅಕ್ರಮವಾಗಿ ಪ್ರವೇಶಿಸುವವರು ನುಸುಳುಕೋರರಾಗಿದ್ದಾರೆ ಎಂದು ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಅಸ್ಸಾಮಿನ ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌ನ ಕರಡು ಪಟ್ಟಿಯಲ್ಲಿ ಹೆಸರುಗಳನ್ನು ಕೈಬಿಟ್ಟಿರುವ ಬಗ್ಗೆ ಬೊಬ್ಬೆ ಹೊಡೆಯುತ್ತಿರುವವರು ವಿಶ್ವಸಂಸ್ಥೆಯ ನಿರಾಶ್ರಿತರ ರಾಯಭಾರಿ ಕಚೇರಿ(ಯುಎನ್‌ಎಚ್‌ಸಿಆರ್)ಯು ನಿರಾಶ್ರಿತ ಶಬ್ಧಕ್ಕೆ ನೀಡಿರುವ ವ್ಯಾಖ್ಯೆಯನ್ನು ಮೊದಲು ಓದಬೇಕು ಎಂದಿದ್ದಾರೆ.
ತನ್ನ ದೇಶದ ಗಡಿಯನ್ನು ದಾಟುವ ಯಾವುದೇ ವಯಸ್ಕ ವ್ಯಕ್ತಿ ನಿರಾಶ್ರಿತ ವ್ಯಾಖ್ಯೆಗೊಳಪಡುವುದಿಲ್ಲ. ಕೆಲವು ಕಾರಣಗಳಿಂದ ಭಾರತ ಸರಕಾರವು ಯುಎನ್‌ಎಚ್‌ಸಿಆರ್ ವ್ಯಾಖ್ಯೆಯನ್ನು ಇನ್ನೂ ಔಪಚಾರಿಕವಾಗಿ ಒಪ್ಪಿಕೊಂಡಿಲ್ಲ. ಅದು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಓಡಿಬರುವ ಹಿಂದುಗಳು, ಸಿಕ್ಖರು,ಕ್ರೈಸ್ತರು ಮತ್ತು ಬೌದ್ಧರನ್ನು ನಿರಾಶ್ರಿತರೆಂದು ಪರಿಗಣಿಸುತ್ತಿದೆ.
ಮುಸ್ಲಿಮರು ತಮ್ಮ ಸ್ವದೇಶಗಳಲ್ಲಿ ಯಾವುದೇ ಹಿಂಸೆಯನ್ನು ಎದುರಿಸುತ್ತಿರುವುದಿಲ್ಲ, ಹೀಗಾಗಿ ಭಾರತವನ್ನು ಪ್ರವೇಶಿಸುವ ಮುಸ್ಲಿಮರು ನಿರಾಶ್ರಿತರಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ರಾಯ್ ಹೇಳಿದ್ದಾರೆ.







