10 ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಆ.1: ಅರಣ್ಯ ಘಟಕದ ಎಡಿಜಿಪಿ ಡಾ.ಎ.ಎಸ್.ಮೂರ್ತಿ ಸೇರಿದಂತೆ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಎಡಿಜಿಪಿ ಎ.ಎಸ್.ಮೂರ್ತಿ ಅವರನ್ನು ಮಾನವ ಹಕ್ಕು ಆಯೋಗದ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಕಲಬುರ್ಗಿ ವಲಯದ ಐಜಿಪಿ ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಐಜಿಪಿ ಸ್ಥಾನಕ್ಕೆ ನೇಮಿಸಲಾಗಿದೆ.
ದಾವಣಗೆರೆ ವಲಯದ ಐಜಿಪಿ ಕೆ.ವಿ.ಶರತ್ ಚಂದ್ರ ಅವರನ್ನು ಮೈಸೂರು ವಲಯದ ಐಜಿಪಿ ಸ್ಥಾನಕ್ಕೆ ನೇಮಿಸಲಾಗಿದೆ. ರೈಲ್ವೆ ಪೊಲೀಸ್ ಎಡಿಜಿಪಿ ಮನೀಶ್ ಕರ್ಬೀಕರ್, ಕಲಬುರ್ಗಿ ವಲಯದ ಎಡಿಜಿಪಿ ಹುದ್ದೆಗೆ ನೇಮಕಗೊಂಡಿದ್ದಾರೆ.
ಮೈಸೂರು ವಲಯದ ಐಜಿಪಿ ಸೌಮೇಂದು ಮುಖರ್ಜಿ-ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ, ಎಸಿಬಿಯ ಐಜಿಪಿ ಚಂದ್ರಶೇಖರ್ ಅವರಿಗೆ ಲೋಕಾಯುಕ್ತ ಎಸ್‌ಐಟಿಯ ಐಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಬಂಧೀಖಾನೆ ವಿಭಾಗದ ಡಿಐಜಿಯಾಗಿದ್ದ ಎಚ್.ಎಸ್.ರೇವಣ್ಣ ಅವರನ್ನು ಅಗ್ನಿಶಾಮಕ ವಿಭಾಗದ ಡಿಐಜಿ ಹುದ್ದೆಗೆ ವರ್ಗ ಮಾಡಲಾಗಿದೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಿ, ಪಶ್ಚಿಮ ವಿಭಾಗದ ಸಂಚಾರ ಡಿಸಿಪಿಯಾಗಿ ನೇಮಿಸಲಾಗಿದೆ.
ಬೀದರ್ ಎಸ್ಪಿ ಡಿ.ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ. ಬೆಂಗಳೂರು ಎಸಿಬಿ ವಿಭಾಗದ ಎಸ್ಪಿಯಾಗಿದ್ದ ಟಿ.ಶ್ರೀಧರ ಅವರನ್ನು ಬೀದರ್ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







