ಕೆಸಿ ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸದಂತೆ ಆದೇಶಿಸಿದ್ದ ತಡೆಯಾಜ್ಞೆ ಆ.16ರವರೆಗೆ ವಿಸ್ತರಣೆ
ಬೆಂಗಳೂರು, ಆ.1: ಕೆಸಿ ವ್ಯಾಲಿ ಯೋಜನೆ ಮೂಲಕ ನಗರದ ಕಲುಷಿತ ನೀರನ್ನು ಶುದ್ಧೀಕರಿಸಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿರುವ ಸರಕಾರದ ಕ್ರಮಕ್ಕೆ ಈಗಾಗಲೇ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಆ.16ವರೆಗೆ ವಿಸ್ತರಿಸಿದೆ.
ಕೆಸಿ ವ್ಯಾಲಿ ಮತ್ತು ಎಚ್‌ಎನ್ ವ್ಯಾಲಿ ಯೋಜನೆ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ವಾದಿಸಿ, ಕೆರೆಗಳಿಗೆ ಹರಿಸಿರುವ ನೀರಿನ ಗುಣಮಟ್ಟದ ವರದಿ ಹಾಗು ಬೋರ್‌ವೆಲ್‌ಗಳ ನೀರಿನ ಗುಣಮಟ್ಟದ ವರದಿಯನ್ನು ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಪೀಠಕ್ಕೆ ಕೋರಿದರು.
ಎಜಿ ಮನವಿ ಪುರಸ್ಕರಿಸಿದ ಪೀಠ ವರದಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಆ.16ಕ್ಕೆ ಮುಂದೂಡಿತು. ಇದೇ ವೇಳೆ ಕೊಳಕು ನೀರನ್ನು ಸರಿಯಾಗಿ ಶುದ್ಧೀಕರಿಸದೆ ಕೆರೆಗಳಿಗೆ ಹರಿಸಿರುವುದು ಹಾಗೂ ಈ ಸಂಬಂಧ ಸೂಕ್ತ ದಾಖಲೆಗಳನ್ನು ಸರಕಾರ ಹೊಂದಿಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿತು.





