ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಅಗತ್ಯ: ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು,ಆ.1: ತಾಯಿ ಹಾಗೂ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬಾಲಭವನ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿಂದು ಆಯೋಜಿಸಿದ್ದ 'ತಾಯಿಯ ಎದೆ ಹಾಲಿನ ಮಹತ್ವ'ದ ಅರಿವು ಹಾಗೂ 'ಸಾಮೂಹಿಕ ಸೀಮಂತ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ಎದೆ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯ ಎದೆ ಹಾಲಿಗೆ ಜಾತಿ ಧರ್ಮದ ಬೆಲೆ ಇಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲನ್ನು ಉಣಿಸುವ ಮೂಲಕ ಆರೋಗ್ಯವಂತ ಪ್ರಜೆಯನ್ನಾಗಿ ರೂಪಿಸಬೇಕು ಎಂದರು.
ಎದೆಹಾಲಿನ ಮಹತ್ವದ ಅರಿವು ನೀಡುವ ಜೊತೆಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಿದ ಅವರು, ಕಷ್ಟ ಮತ್ತು ಸುಖದ ಸಂದರ್ಭದಲ್ಲಿಯೂ ತಾಯಿ ಎಲ್ಲರಿಗೂ ನೆನಪಾಗಬೇಕು. ಆದರೆ ಮಕ್ಕಳು ತಮ್ಮ ತಂದೆ-ತಾಯಿಯರನ್ನೇ ಕೊಲ್ಲುತ್ತಿರುವ ದುರ್ದೈವದ ದಿನಗಳು ಬಂದಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್, ತಾಯಂದಿರು ಮಗುವಿಗೆ ಎದೆ ಹಾಲು ನೀಡುವುದನ್ನು ನಿರ್ಲಕ್ಷಿಸಬಾರದು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಪ್ರತಿ ವರ್ಷ ಅಂಗನವಾಡಿ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಅವರು ಜಿಲ್ಲಾ ಮಟ್ಟದಲ್ಲಿ ಸಂಘಟಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಗುವಿಗೆ ಎದೆ ಹಾಲು ಅಮೃತವಿದ್ದಂತೆ. ಉತ್ತಮ ಪೌಷ್ಠಿಕ ಆಹಾರವನ್ನು ತಾಯಂದಿರು ಸೇವಿಸಬೇಕು. ಯಾವುದಕ್ಕೂ ಮಗುವಿಗೆ ಎದೆ ಹಾಲನ್ನು ನೀಡುವುದನ್ನು ತಪ್ಪಿಸಬಾರದು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ (ಪ್ರಭಾರ) ಎಸ್. ನಟರಾಜ್, ನಿವೃತ್ತ ಜಂಟಿ ನಿರ್ದೇಶಕ ಪರಮೇಶ್ವರಪ್ಪ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನಡೆಸಿ ಕೊಡಲಾಯಿತು. ಎದೆ ಹಾಲಿನ ಮಹತ್ವ ಹಾಗೂ ತಾಯಂದಿರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಕ್ಕಳ ತಜ್ಞೆ ಡಾ.ರಜನಿ ಅವರು ಉಪನ್ಯಾಸ ನೀಡಿದರು.







