ಶಕ್ತಿ ವಸತಿ ಶಾಲೆ, ಪ.ಪೂ.ಕಾಲೇಜಿನ ಪೋಸ್ಟರ್ ಬಿಡುಗಡೆ
ಮಂಗಳೂರು, ಆ.1: ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಪೋಸ್ಟರನ್ನು ಇಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಯ್ಕ ಬಿಡುಗಡೆಗೊಳಿಸಿದರು.
ಕಾಲೇಜಿನ ಸಭಾಂಗಣದಲ್ಲಿ ಪೋಸ್ಟರ್ ಬಿಡುಗಡೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಮಾರ್ಗದರ್ಶಕ ವಿ.ಕೆ. ತಾಳಿತ್ತಾಯ, ಟ್ರಸ್ಟ್ ವತಿಯಿಂದ 2015ರಲ್ಲಿ ಶಕ್ತಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಭೂಮಿ ಪೂಜೆ ನಡೆದಿದ್ದು, 2018ರಲ್ಲಿ ಸರಕಾರದಿಂದ ಅನುಮತಿ ದೊರಕಿದೆ. ಇದೀಗ ಶಾಲೆ ಹಾಗೂ ಕಾಲೇಜು ಆರಂಭಗೊಂಡಿದೆ ಎಂದು ಹೇಳಿದರು.
ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಮನೋಭಾವನೆಯನ್ನು ಸ್ಪರ್ಧಾತ್ಮಕವಾಗಿ ಸ್ಫೂರ್ತಿ ನೀಡಲಾಗುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ 1ರಿಂದ 5ನೆ ತರಗತಿಯವರೆಗೆ ಹಾಗೂ ಪಿಯುಸಿ ವಿಭಾಗದಲ್ಲಿ ವಿಜ್ಞಾನ (ಪಿಸಿಎಂಬಿ ಹಾಗೂ ಪಿಸಿಎಂಸಿ) ಮತ್ತು ವಾಣಿಜ್ಯ ವಿಭಾಗ ಆರಂಭಗೊಂಡಿದೆ. ಮುಂದಿನ ವರ್ಷದಲ್ಲಿ 6ರಿಂದ 8ನೆ ತರಗತಿವರೆಗೆ ಆರಂಭಗೊಳ್ಳಲಿದೆ. ಸಂಸ್ಥೆಗೆ ಅನುಮತಿ ದೊರಕುವುದು ತಡವಾದ ಹಿನ್ನೆಲೆಯಲ್ಲಿ ಈ ಬಾರಿ ಸದ್ಯ 1ರಿಂದ 5ನೆ ತರಗತಿವರೆಗೆ 50 ವಿದ್ಯಾರ್ಥಿಗಳು ಹಾಗೂ ಕಾಲೇಜಿನ 50 ವಿದ್ಯಾರ್ಥಿಗಳು ಮಾತ್ರವೇ ಪ್ರವೇಶ ಪಡೆಯಲು ಸಾಧ್ಯವಾಗಿದೆ ಎಂದವರು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರತಿಯೊಂದು ತರಗತಿಯು ಹವಾನಿಯಂತ್ರಿತ ಕೊಠಡಿಯಾಗಿದೆ. ಪ್ರತಿ ತರಗತಿಯಲ್ಲಿ 70 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ ಹಾಗೂ ಪಿಸಿಎಂಎಸ್ ಆಯ್ಕೆಗಳಿದ್ದು, ವಾಣಿಜ್ಯ ವಿಭಾಗದಲ್ಲಿ ಸಿಇಬಎ ಆಯ್ಕೆ ಇದೆ. ಕಾಮರ್ಸ್ ವಿಭಾಗಕ್ಕೆ ಸಿಎ- ಸಿಪಿಟಿಯ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು ಸದ್ಯ 4 ಎಕರೆ ಜಾಗವನ್ನು ಹೊಂದಿದೆ. ಆಡಳಿತ ವಿಭಾಗ, ಸುಸಜ್ಜಿತ ಕಟ್ಟಡದ ಜತೆಗೆ 2 ಎಕರೆ ಆಟದ ಮೈದಾನ ಸಿದ್ಧವಾಗುತ್ತಿದೆ. ಇದೇ ವೇಳೆ ಸ್ವಿಮ್ಮಿಂಗ್ ಪೂಲ್ ಕೂಡಾ ನಿರ್ಮಾಣವಾಗುತ್ತಿದೆ. ವಿಶಾಲವಾದ ಕ್ಯಾಂಟೀನಂ ಸೌಲಭ್ಯವಿದ್ದು, ವಿಶೇಷ ತರಗತಿ ನಡೆಸಲು ಸಂಪನ್ಮೂಲ ವ್ಯಕ್ತಿಗಳು, ಅತಿಥಿ ಉಪನ್ಯಾಸಕರ್ನು ಕೂಡಾ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕರೆಸಲಾಗುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಅಂತಾರಾಷ್ಟ್ರೀಯ ಗುಣಮಟ್ಟದ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಎಲ್ಲಾ ಕೊಠಡಿಗಳೂ ಹವಾನಿಯಂತ್ರಿತ ವಾಗಿರುತ್ತದೆ. ಕೊಠಡಿಗಳು ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಕೂಡಾ ಹೊಂದಿರುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ಕ್ಯಾಂಪಸನ್ನು ಸಂಸ್ಥೆ ಹೊಂದಿದ್ದು, ಡಿಜಿಟಲ್ ವ್ಯವಸ್ಥೆಯೊಂದಿಗೆ ತರಗತಿಗಳನ್ನು ನಡೆಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಕೆ.ಸಿ. ನಾಯ್ಕಿ, ವಸತಿ ಶಾಲೆ ಸಂಚಾಲಕ ಸಂಜಿತ್ ನಾಯ್ಕಿ, ಟ್ರಸ್ಟಿ ಮುರಳೀಧರ ನಾಯ್ಕಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾಕರ್, ಆಡಳಿತಾಧಿಕಾರಿ ಜನಾರ್ದನ ಬೈಕಾಡಿ, ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಮಧುರಿಕಾ, ಅಭಿವೃದ್ಧಿ ಅಧಿಕಾರಿ ನಸೀಮಾ ಬಾನು, ಮುಖ್ಯ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.







