ತಲಪಾಡಿ-ರಾಮಲ್‌ಕಟ್ಟೆಯ ಸರ್ವೀಸ್ ರಸ್ತೆಯಲ್ಲಿ ಟೋಲ್ ವಸೂಲಿ: ಆರೋಪ

ಬಂಟ್ವಾಳ, ಆ. 1: ರಾಷ್ಟ್ರೀಯ ಹೆದ್ದಾರಿ-73ರ ಟೋಲ್‌ಗೇಟ್ ರಸ್ತೆಗೆ ಸಮನಾಂತರವಾರಿರುವ ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆರೋಪಿಸಿದ್ದಾರೆ.
ತಲಪಾಡಿಯಿಂದ ರಾಮಲ್‌ಕಟ್ಟೆಯವರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ 73ರ ರಸ್ತೆಗೆ ಸಮನಾಂತರವಾಗಿರುವ ರಸ್ತೆಗೆ ಬ್ರಹ್ಮರಕೂಟ್ಲು ಇತ್ತೀಚೆಗೆ ಸ್ಥಳೀಯರ ಹಾಗೂ ಜಿಲ್ಲಾಡಳಿತದ ಕೋರಿಕೆಯಂತೆ ನೂತನ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ, ಈ ಸರ್ವೀಸ್ ರಸ್ತೆಯಲ್ಲಿ ಸ್ಥಳೀಯ ವಾಹನಗಳಿಗೂ ಟೋಲ್ ಶುಲ್ಕ ವಿಧಿಸಲಾಗುತ್ತದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ'ಯೊಂದಿಗೆ ಟೋಲ್ ಸಂಸ್ಥೆಯ ಗುತ್ತಿಗೆದಾರರ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ಈ ಸರ್ವೀಸ್ ರೋಡ್‌ನಲ್ಲಿ ಭಾರೀ ವಾಹನಗಳು ಟೋಲ್ ತಪ್ಪಿ ಸಂಚರಿಸುತ್ತಿವೆ. ಅಲ್ಲದೆ, ಹೊರ ರಾಜ್ಯ, ಜಿಲ್ಲೆಗಳ ವಾಹನಗಳು ಕೂಡಾ ಇದೇ ಸರ್ವೀಸ್ ರಸ್ತೆಯನ್ನು ಬಳಸುತ್ತಿದೆ. ರಾತ್ರಿ ಪಾಳಯದಲ್ಲಿ ಲಘು, ಭಾರೀ ಘನ ವಾಹಗಳು ಕೂಡಾ ಈ ರಸ್ತೆಯನ್ನು ಅವಲಂಭಿಸಿವೆ. ಇದರಲ್ಲಿ ಭಾರೀ ವಾಹನಗಳು ಹೋಗದಂತೆ ಬ್ಯಾರಿಕೇಡ್ ಅಳವಡಿಸಲಾಗಿದ್ದರೂ ಟೋಲ್ ತಪ್ಪಿಸಿ ಚಲಿಸುತ್ತವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮೂಲಕ ದೂರನ್ನು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದಿನಕ್ಕೆ ಸುಮಾರು 1.75 ಲಕ್ಷ ರೂ. ಸಂಗ್ರಹ ಮಾಡಿಕೊಡಬೇಕಾಗುತ್ತದೆ. ಕೆಲ ತಿಂಗಳುಗಳಲ್ಲಿ ಸುಮಾರು 1.50 ಲಕ್ಷ ರೂ. ಶುಲ್ಕ ವಸೂಲಾತಿಯಾಗುತ್ತದೆ. ಇದರಿಂದ ಟೋಲ್ ಸಂಸ್ಥೆಗೆ ಭಾರೀ ನಷ್ಟವಾಗುತ್ತಿದ್ದು, ಪರಣಾಮ ಸಂಸ್ಥೆಯ ಕೈಯಿಂದಲೇ ಸರಕಾರಕ್ಕೆ ಜಮಾ ಮಾಡಲಾಗುತ್ತಿದೆ. ವಾಹನಗಳು ಟೋಲ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ಹೋಗುವುದರಿಂದ ಈ ನಷ್ಟ ಉಂಟಾಗಿದೆ ಎಂದು ಟೋಲ್ ಸಂಸ್ಥೆಯ ಗುತ್ತಿಗೆದಾರರ ಸಿಬ್ಬಂದಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ತಲಪಾಡಿಯಿಂದ ರಾಮಲ್‌ಕಟ್ಟೆಯವರೆಗಿನ ಸರ್ವೀಸ್ ರಸ್ತೆಯ ಬ್ರಹ್ಮರಕೂಟ್ಲುವಿನಲ್ಲಿ ಬ್ಯಾರಿಕೇಡ್ ಅಳವಡಿಸಿ ಜು. 31ರಿಂದ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ.







