ಮಾಲೂರು: ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಹತ್ಯೆ
ಅತ್ಯಾಚಾರ ಶಂಕೆ

ಮಾಲೂರು, ಆ.1: ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವ ಘಟನೆ ಮಾಲೂರು ರೈಲು ನಿಲ್ದಾಣದ ಸಮೀಪ ಬುಧವಾರ ಸಂಜೆ ನಡೆದಿದೆ.
ಮೃತಳನ್ನು ತಾಲೂಕಿನ ಇಂದಿರಾ ನಗರ ನಿವಾಸಿ, ಪಟ್ಟಣದ ಬಿಜಿಎಸ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಸಂಜೆ ಶಾಲೆ ಬಿಟ್ಟ ಬಳಿಕ ಕ್ರೀಡೆ ಅಭ್ಯಾಸ ಮಾಡಿ ತನ್ನ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಆಕೆಯನ್ನು ಅಪಹರಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಹೆದರಿ ಓಡಿ ಹೋಗಿರುವ ಸ್ನೇಹಿತೆ ಭಯದಿಂದ ಈ ವಿಷಯ ಯಾರಿಗೂ ತಿಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತಳ ದೇಹದಲ್ಲಿ ಪರಚಿದ ಹಾಗೂ ತಲೆಗೆ ತೀವ್ರವಾದ ಹೊಡೆದ ಗಾಯಗಳು ಕಂಡು ಬಂದಿದ್ದು, ಇದರಿಂದ ಅಪಹರಿಸಿದ ವ್ಯಕ್ತಿಯು ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ತಡವಾದರೂ ಮಗಳು ಮನೆಗೆ ಬಾರದಿರುವುದರಿಂದ ಮೃತಳ ತಂದೆ ಹಾಗೂ ಸ್ಥಳೀಯರು ಹುಡುಕಾಟದಲ್ಲಿ ತೊಡಗಿದಾಗ ರೈಲು ನಿಲ್ದಾಣ ಸಮೀಪದ ಪೊದೆಯೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹಾಗೂ ಆಸ್ಪತ್ರೆಯ ಎದುರು ನೂರಾರು ಜನ ಸೇರಿದರು. ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರಲ್ಲದೆ ಮಾರಿಕಾಂಬ ದೇವಿಯ ದ್ವಾರದ ಎದುರು ರಸ್ತೆ ತಡೆ ನಡೆಸಿದರು. ಇದರಿಂದ ಕೆಲವು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.







