ಲಂಕಾಷೈರ್ ಪ್ರವೇಶ ಸ್ಮರಣೀಯಗೊಳಿಸಿದ ಕೌರ್

ಲಂಡನ್, ಆ.1: ಭಾರತದ ಟ್ವೆಂಟಿ-20 ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಿಯಾ ಸೂಪರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನ ಕೊನೆಯ ಓವರ್‌ನ 4 ಎಸೆತಗಳಲ್ಲಿ 13 ರನ್ ಸಿಡಿಸುವ ಮೂಲಕ ಲಂಕಾಷೈರ್ ಥಂಡರ್ ತಂಡದ ಗೆಲುವಿಗೆ ನೆರವಾಗಿದ್ದಾರೆ.
ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸರ್ರೆ ಸ್ಟಾರ್ಸ್ ವಿರುದ್ಧ ಗೆಲುವಿಗೆ 149 ರನ್ ಗಳಿಸಬೇಕಿದ್ದ ಲಂಕಾಷೈರ್ ತಂಡ ಇನ್ನೂ 1 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿ ಗೆಲುವಿನ ದಡ ಸೇರಿತು.
ಕೊನೆಯ ಓವರ್‌ನಲ್ಲಿ ಲಂಕಾಷೈರ್ ತಂಡ ಗೆಲುವಿಗೆ 11 ರನ್ ಗಳಿಸಬೇಕಿತ್ತು. ಲೌರಾ ಮಾರ್ಷ್‌ರ ಮೊದಲ ಎಸೆತದಲ್ಲಿ ಕೌರ್ 1 ರನ್ ಗಳಿಸಿದರು. ಎರಡನೇ ಎಸೆತದಲ್ಲಿ ತ್ರಿಲ್‌ಕೆಲ್ಡ್ ರನೌಟಾದರು. 3ನೇ ಎಸೆತದಲ್ಲಿ 2ರನ್, 4ನೇ ಎಸೆತದಲ್ಲಿ ಬೌಂಡರಿ ಮತ್ತು 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೌರ್ ಚೊಚ್ಚಲ ಪಂದ್ಯದಲ್ಲಿ ಔಟಾಗದೆ 34 ರನ್(21ಎ, 3ಬೌ,1ಸಿ) ಗಳಿಸಿದರು. ಬೊಲ್ಟನ್ 87 ರನ್ ಗಳಿಸಿದರು. ಇದಕ್ಕೂ ಮೊದಲು ಸರ್ರೆ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು. ಸ್ಕೀವೆರ್ 95 ರನ್ ಗಳಿಸಿದರು.





