ಎಬಿಪಿ ನ್ಯೂಸ್ ನಲ್ಲಿ ಉರುಳುತ್ತಿವೆ ಒಂದರ ನಂತರ ಒಂದು ತಲೆಗಳು !
ಪ್ರಮುಖ ಪತ್ರಕರ್ತರ ಹಠಾತ್ ನಿರ್ಗಮನದ ಹಿಂದೆ ಇರುವವರು ಯಾರು ?

ದೇಶದ ಪ್ರಮುಖ ಹಿಂದಿ ಸುದ್ದಿ ಚಾನಲ್ ಗಳಲ್ಲಿ ಒಂದಾದ ಎಬಿಪಿ ನ್ಯೂಸ್ ರೂಮ್ ನಲ್ಲಿ ದೊಡ್ಡ ಬೆಳವಣಿಗೆಗಳಾಗಿವೆ. ಇದ್ದಕ್ಕಿದ್ದಂತೆ ಚಾನಲ್ ನ ಖ್ಯಾತ ಮುಖಗಳು ಒಂದೊಂದಾಗಿ ರಾಜೀನಾಮೆ ನೀಡುತ್ತಿದ್ದಾರೆ ಅಥವಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗುತ್ತಿದೆ .
ಎಬಿಪಿ ನ್ಯೂಸ್ ನ ಪ್ರಖ್ಯಾತ ಕಾರ್ಯಕ್ರಮ ಮಾಸ್ಟರ್ ಸ್ಟ್ರೋಕ್ ನ ನಿರೂಪಕ, ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೇಯಿ ಗುರುವಾರ ಇದ್ದಕ್ಕಿದ್ದಂತೆ ಚಾನಲ್ ಗೆ ರಾಜೀನಾಮೆ ನೀಡಿದ್ದಾರೆ. ಚಾನಲ್ ನ ತನ್ನ ಎಲ್ಲ ಸಹೋದ್ಯೋಗಿಗಳಿಗೆ ತನ್ನ ವಿದಾಯದ ನಿರ್ಧಾರವನ್ನು ತಿಳಿಸಿ ಎಲ್ಲರಿಗೂ ಶುಭ ಕೋರಿ ಅವರು ನಿರ್ಗಮಿಸಿದ್ದಾರೆ ಎಂದು ಜನತಾಕ ರಿಪೋರ್ಟರ್ ವೆಬ್ ಸೈಟ್ ವರದಿ ಮಾಡಿದೆ.
ತನ್ನ ಹಠಾತ್ ನಿರ್ಗಮನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಾಜಪೇಯಿ ನಿರಾಕರಿಸಿದ್ದಾರೆ.
ಬುಧವಾರವಷ್ಟೇ ಚಾನಲ್ ನ ವ್ಯವಸ್ಥಾಪಕ ಸಂಪಾದಕ ಹಾಗು ಸಂಪಾದಕೀಯ ಮುಖ್ಯಸ್ಥ ಮಿಲಿಂದ್ ಖಂಡೇಕರ್ ರಾಜೀನಾಮೆ ಪ್ರಕಟಿಸಿದ್ದರು. 14 ವರ್ಷಗಳಿಂದ ನಾನು ಸೇವೆ ಸಲ್ಲಿಸಿದ್ದ ಚಾನಲ್ ನಿಂದ ಹೊರಡುವ ಸಮಯ ಬಂದಿದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು.
ಈ ನಡುವೆ ಚಾನಲ್ ನ ಇನ್ನೋರ್ವ ಖ್ಯಾತ ಆಂಕರ್ ಅಭಿಸಾರ ಶರ್ಮ ಅವರನ್ನು ಎರಡು ವಾರಗಳ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ ಎಂದು ಹೇಳಲಾಗಿದೆ. ಶರ್ಮ ಇತ್ತೀಚಿಗೆ ಟಿವಿಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಅತ್ಯಂತ ಕಟುವಾಗಿ ಟೀಕಿಸಿ, ವಿಶ್ಲೇಷಣೆ ನಡೆಸುತ್ತಿದ್ದರು. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ "ಇದು ಸರ್ಕಾರದ ಒತ್ತಡದಿಂದ ಆಗಿದ್ದರೆ ಅತ್ಯಂತ ದುರದೃಷ್ಟಕರ. ಈ ಬಗ್ಗೆ ಚಾನಲ್ ಮಾಲಕರು ಸ್ಪಷ್ಟನೆ ನೀಡಬೇಕು " ಎಂದು ಹೇಳಿದ್ದಾರೆ.
ಚಾನಲ್ ನ ಇನ್ನೋರ್ವ ಪತ್ರಕರ್ತ ರಾಜನ್ ಸಿಂಗ್ ಅವರಿಗೂ ಕೆಲಸ ಬಿಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಈವರೆಗೆ ಖಂಡೇಕರ್ ಜೊತೆ ಇನ್ಪುಟ್ ವ್ಯವಸ್ಥಾಪಕ ಸಂಪಾದಕರಾಗಿದ್ದ ರಜನೀಶ್ ಅಹುಜಾ ಅವರಿಗೆ ಚಾನಲ್ ಉಸ್ತುವಾರಿಯನ್ನು ಈಗ ವಹಿಸಲಾಗಿದೆ.
ಎಬಿಪಿ ನ್ಯೂಸ್ ಇತ್ತೀಚಿಗೆ ಕೇಂದ್ರ ಸರ್ಕಾರದ ವಿರುದ್ಧ ವಿಶ್ಲೇಷಣಾತ್ಮಕ ಸುದ್ದಿಗಳನ್ನು, ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಸುದ್ದಿಯಲ್ಲಿತ್ತು. ಹೆಚ್ಚಿನ ಹಿಂದಿ ಚಾನಲ್ ಗಳು ಕೇಂದ್ರ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವಾಗ ಎಬಿಪಿ ನ್ಯೂಸ್ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿದ್ದು ಚರ್ಚೆಯಲ್ಲಿತ್ತು.
ಇತ್ತೀಚಿಗೆ ಛತ್ತೀಸ್ ಗಢದಲ್ಲಿ ಪ್ರಧಾನಿ ಮೋದಿ ಜೊತೆ ಮಹಿಳೆಯರು ಸಂವಾದ ನಡೆಸಿದ ಕಾರ್ಯಕ್ರಮ ಫಿಕ್ಸ್ ಆಗಿತ್ತು ಎಂದು ಎಬಿಪಿ ಸುದ್ದಿ ಮಾಡಿತ್ತು. ಅಲ್ಲಿ ಚಂದ್ರಮಣಿ ಎಂಬ ಮಹಿಳೆ ತನ್ನ ಕೃಷಿ ಆದಾಯ ದುಪ್ಪಟ್ಟಾಗಿದೆ ಎಂದು ಹೇಳಿದ್ದರು. ಆದರೆ ಆಕೆಗೆ ಹಾಗೆ ಹೇಳುವಂತೆ ತರಬೇತಿ ನೀಡಲಾಗಿತ್ತು ಎಂದು ಎಬಿಪಿ ಸುದ್ದಿ ಮಾಡಿತ್ತು.