ಶಾಲೆಗೊಬ್ಬ ರಂಗ ಶಿಕ್ಷಕರ ನೇಮಕ: ಸಚಿವ ಎನ್.ಮಹೇಶ್

ಬೆಂಗಳೂರು, ಆ.2: ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಶಾಲೆಗೆ ಒಬ್ಬರಂತೆ ರಂಗ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದ್ದಾರೆ.
ಗುರುವಾರ ಆರ್.ಟಿ. ನಗರದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ರಂಗ ಶಿಕ್ಷಣ ಪದವೀಧರರ ಸಂಘ ಆಯೋಜಿಸಿದ್ದ, ರಾಜ್ಯಮಟ್ಟದ ರಂಗಶಿಕ್ಷಣ ಪದವೀಧರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ವ್ಯಾಪ್ತಿಯಲ್ಲಿ 1,200 ಮಂದಿ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಪದವಿ ಮಾಡಿರುವ ಮಾಹಿತಿ ಇದ್ದು, ಹಾಲಿ 44 ರಂಗ ಶಿಕ್ಷಕರು ಬೋಧನೆಯಲ್ಲಿ ನಿರತರಾಗಿದ್ದಾರೆ. ಇನ್ನೂ, ಶಾಲೆಗೆ ಒಬ್ಬರಂತೆ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಪರಿಶೀಲನೆ ನಡೆಸಿ, ಶಾಸನಬದ್ಧವಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ರಂಗ ಶಿಕ್ಷಕರು, ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುತ್ತಾರೆ. ಜತೆಗೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತಾರೆ. ಹೀಗಾಗಿ, ಈ ಶಿಕ್ಷಕರ ನೇಮಕ ಅಗತ್ಯ ಇದೆ ಎಂದರು.
ಸ್ಪೋಕನ್ ಇಂಗ್ಲಿಷ್: ಪ್ರಾಥಮಿಕ ಶಾಲಾ ಮಟ್ಟದಿಂದ ಆಂಗ್ಲ ಭಾಷೆ ಬೋಧನೆ ಮಾಡುವುದರಿಂದ ಇಂಗ್ಲಿಷ್ ಮಾತನಾಡುವ ಕಲಿಕೆ ಗುರಿ ಇಲಾಖೆ ಹೊಂದಿದೆ. ಇದರಿಂದ, ಕನ್ನಡ ಭಾಷೆಗೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ಮಹೇಶ್ ತಿಳಿಸಿದರು.
ಚಿತ್ರದುರ್ಗದ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಶಾಲೆ ಮುಚ್ಚಲು ನೀರಸ ಬೋಧನೆ ಪ್ರಮುಖ ಕಾರಣವಾಗಿದೆ. ಆದರೆ, ರಂಗಶಿಕ್ಷಕ ಇದ್ದರೆ, ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಲಿದೆ ಎಂದು ನುಡಿದರು.
ಸಮಾವೇಶದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಾನು ಮಕ್ಕಳಿಗೆ ಜ್ಞಾನದ ಸ್ವಾತಂತ್ರ ಬೇಕೆಂದು ಹೇಳಿದ್ದೇ ವಿನಃ, ಪರೀಕ್ಷೆಯಲ್ಲಿ ಪಠ್ಯ ಪುಸ್ತಕ ನೋಡಿಕೊಂಡು ನಕಲು ಮಾಡಬೇಕೆಂದು ಹೇಳಿಲ್ಲ.
-ಎನ್.ಮಹೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ







