ಡ್ರೋನ್ ತಂತ್ರಜ್ಞಾನ ಬಳಕೆಗೆ ನೂತನ ನೀತಿ ಶೀಘ್ರ ಪ್ರಕಟ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಆ.2: ರಾಜ್ಯ ಸರಕಾರವು ಡ್ರೋನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು ಆಸಕ್ತಿ ಹೊಂದಿದ್ದು, ಶೀಘ್ರದಲ್ಲಿಯೆ ಇವುಗಳನ್ನು ಕೃಷಿ, ನಗರಾಭಿವೃದ್ಧಿ ಮತ್ತು ಪೊಲೀಸ್ ಕಾರ್ಯಾಚರಣೆಗಳಲ್ಲಿ ಬಳಸಲು ನೀತಿಯನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಗುರುವಾರ ಜಿ.ಕೆ.ವಿ.ಕೆ ಆವರಣದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆಟದ ಮೈದಾನದಲ್ಲಿ ‘ಮಾನವರಹಿತ ವೈಮಾನಿಕ ವ್ಯವಸ್ಥೆ ಪ್ರಾಯೋಗಿಕ ಯೋಜನೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ನೀತಿ ಕೇವಲ ಡ್ರೋನ್‌ಗಳ ಬಳಕೆಯ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸದೆ ಸ್ಥಳೀಯವಾಗಿ ಡ್ರೋನ್‌ಗಳ ವಿನ್ಯಾಸ ಮತ್ತು ಉತ್ಪಾದನೆ ಕಡೆಗೂ ಗಮನ ಹರಿಸಲಿದೆ. ರಾಜ್ಯ ಸರಕಾರ ಈ ಮಾದರಿ ಯೋಜನೆಗಳ ಅನುಷ್ಠಾನಕ್ಕಾಗಿ 2.50 ಕೋಟಿ ರೂ.ಗಳ ಅನುದಾನಕ್ಕೆ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ(ಕೆಎಸ್‌ಟಿಇಪಿಎಸ್), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿದ್ದು ಈ ನವೀನ ಡ್ರೋನ್ ಆಧಾರಿತ ಯೋಜನೆಗಳನ್ನು ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಅನುಷ್ಠಾನಕ್ಕೆ ತರಲಿದೆ ಎಂದು ಜಾರ್ಜ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಅಥವಾ ಡ್ರೋನ್‌ಗಳು ಮುಂದಿನ ಪೀಳಿಗೆಯ ತಂತ್ರಜ್ಞಾನವಾಗಿ ಹೊರ ಹೊಮ್ಮುತ್ತಿದ್ದು, ಇವು ಪ್ರತಿಯೊಬ್ಬರ ಗಮನವನ್ನು ಹೆಚ್ಚಾಗಿ ಸೆಳೆಯುತ್ತಿವೆ. ಈ ಡ್ರೋನ್‌ಗಳನ್ನು ವಿಶ್ವವ್ಯಾಪಿಯಾಗಿ ಅನೇಕ ಅನ್ವಯಗಳಲ್ಲಿ ಬಳಸಲಾಗುತ್ತಿದ್ದು ಇವುಗಳಲ್ಲಿ ಸಂಪನ್ಮೂಲ ನಿರ್ವಹಣೆ, ನಗರಾಭಿವೃದ್ಧಿ, ಪರಿಸರ ಸಂರಕ್ಷಣೆ, ವಿಕೋಪ ನಿರ್ವಹಣೆ, ಪೊಲೀಸ್ ನಾಗರಿಕ ಕಾರ್ಯಾಚರಣೆ, ಕೃಷಿ ಮತ್ತು ಮೂಲ ಸೌಕರ್ಯ ನಿರೀಕ್ಷಣೆಗಳು ಸೇರಿವೆ ಎಂದು ಅವರು ವಿವರಿಸಿದರು.
ಕೃಷಿಗಾಗಿ ಡ್ರೋನ್ ಯೋಜನೆಯನ್ನು ಹಾವೇರಿ ತಾಲೂಕಿನ 200 ಚದರ ಕಿಲೋಮೀಟರ್ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎಕರೆವಾರು ಇಳುವರಿ, ಬೆಳೆಗಳ ಮಾದರಿಗಳು, ಬೆಳೆ ಆರೋಗ್ಯ ಮತ್ತು ಇಳುವರಿ ಅಂದಾಜು ಮುಂತಾದವುಗಳ ಮೌಲ್ಯೀಕರಣದಲ್ಲಿ ಇವುಗಳನ್ನು ಬಳಸಲಾಗುತ್ತಿದೆ ಎಂದು ಜಾರ್ಜ್ ಹೇಳಿದರು. ಅಲ್ಲದೆ, ನಗರ ಅಭಿವೃದ್ಧಿಗಾಗಿ ಡ್ರೋನ್ ಯೋಜನೆಯನ್ನು ಬಂಟ್ವಾಳ ಪಟ್ಟಣದಲ್ಲಿ 60 ಚದರ ಕಿಲೋಮೀಟರ್ ಆವರಿಸುವಂತೆ ಕೈಗೆತ್ತಿಕೊಳ್ಳಲಾಗುತ್ತಿದೆ. ವ್ಯವಸ್ಥಿತ ಮತ್ತು ವೈಜ್ಞಾನಿಕ ಪಟ್ಟಣ ಯೋಜನೆಗಾಗಿ ಮಾಸ್ಟರ್‌ಪ್ಲಾನ್ ಸಿದ್ಧಪಡಿಸುವುದಕ್ಕೆ ವಿವರಗಳನ್ನು ಪೂರೈಸಲು, ಮೂಲ ಭೂಪಟವನ್ನು ಸಿದ್ಧಪಡಿಸುವುದಕ್ಕೆ ಈ ಯೋಜನೆ ನೆರವಾಗುತ್ತಿದೆ. ಇದಲ್ಲದೆ, ಕೇಂದ್ರ ಪಟ್ಟಣದಲ್ಲಿ ಆಸ್ತಿ ತೆರಿಗೆ ಅಂದಾಜು ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ರಾಜ್ಯದ ರೈತರ ಬಳಿ ಇರುವ ಹಿಡುವಳಿ ಎಷ್ಟು, ಯಾವ ಯಾವ ಬೆಳೆಗಳನ್ನು ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ ಎಂಬುದರ ಕುರಿತು ನಿಖರವಾಗಿ ನಮ್ಮ ಬಳಿ ಮಾಹಿತಿ ಇಲ್ಲ. ಅಂದಾಜಿನ ಮೇಲೆ ಬೆಳೆಗಳು ನಷ್ಟವಾದಾಗ ಪರಿಹಾರ ಒದಗಿಸಲಾಗುತ್ತಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬಹುದಾಗಿದೆ. ಬೆಳೆ ಸಮೀಕ್ಷೆ ಮಾಡಲು ಈ ಡ್ರೋನ್ ತಂತ್ರಜ್ಞಾನ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.
ಬೆಳೆಗಳಿಗೆ ರೋಗ ರುಜಿನಗಳು ಬಂದು ಹಾಳಾದರೆ ಸಮೀಕ್ಷೆ ಮಾಡಿ, ಶೀಘ್ರ ಮಾಹಿತಿ ಪಡೆದು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಹಾವೇರಿ ತಾಲೂಕಿನಲ್ಲಿ ಮಾಡಿರುವ ಮಾದರಿಯನ್ನು ಇಡೀ ರಾಜ್ಯದಲ್ಲಿ ಒಂದು ತಿಂಗಳಲ್ಲಿ ಅನುಷ್ಠಾನ ಮಾಡುತ್ತೇವೆ. ನಮ್ಮ ರಾಜ್ಯದಲ್ಲಿ 1.92 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವಿದೆ. ಅದನ್ನು ಸಮೀಕ್ಷೆ ಮಾಡುವುದರಿಂದ ನಮಗೆ ಇಡೀ ರಾಜ್ಯದ ಮಾಹಿತಿ ಲಭ್ಯವಾಗಲಿದೆ ಎಂದು ಶಿವಶಂಕರರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಎಸ್.ನಟರಾಜು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಗೌರವ್‌ಗುಪ್ತ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ ಡಾ.ಎಚ್.ಹೊನ್ನೇಗೌಡ, ಕೆಸ್ಟೆಪ್ಸ್ ಇಂಜಿನಿಯರ್ ಸೌಮ್ಯಾ ವೈದ್ಯ ಉಪಸ್ಥಿತರಿದ್ದರು.







