ಮಾನವ ಹಕ್ಕು ಆಯೋಗದಿಂದ ಬಹಿರಂಗ ವಿಚಾರಣೆ: ದೂರುದಾರರ ಸಮಸ್ಯೆಗೆ ಸ್ಥಳದಲ್ಲೆ ಪರಿಹಾರ ನೀಡಿದ ಆಯೋಗ

ಬೆಂಗಳೂರು, ಆ.2: ರಾಷ್ಟ್ರೀಯ ಮಾನವ ಹಕ್ಕು ಆಯೋಗವು ವಿಕಾಸಸೌಧದಲ್ಲಿ ಆಯೋಜಿಸಿದ್ದ ಬಹಿರಂಗ ವಿಚಾರಣೆ ಅಧಿವೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ದೂರುದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರೋಪಾಯಗಳನ್ನು ನೀಡಲಾಯಿತು.
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾ.ಎಚ್.ಎಲ್.ದತ್ತು ಹಾಗೂ ಆಯೋಗದ ಸದಸ್ಯರಾದ ನ್ಯಾ.ಪಿ.ಸಿ.ಘೋಷ್, ನ್ಯಾ.ಮುರುಗೇಶನ್ ಹಾಗೂ ಜ್ಯೋತಿಕಾ ಕಲ್ರಾ ಸಮ್ಮುಖದಲ್ಲಿ ದೂರುದಾರರು ತಮ್ಮ ದೂರುಗಳನ್ನು ಹೇಳಿ, ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಿದರು. ಈ ದೂರಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಾದ-ವಿವಾದ ನಡೆದು, ತೀರ್ಪು ನೀಡಲಾಯಿತು.
ಶಿಕ್ಷಣ ಇಲಾಖೆ ಅಧಿಕಾರಿಗಳ ವಂಚನೆ: ದಾವಣಗೆರೆಯ ಚೆನ್ನಗಿರಿ ತಾಲೂಕಿನ ಶಿಕ್ಷಕ ರವಿಕಿರಣ್‌ಗೆ ಬಿಪಿಎಡ್ ಮಾಡಲು ಅರ್ಹತೆ ಹೊಂದಿದ್ದರೂ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವಕಾಶ ನೀಡದೆ ವಂಚಿಸಿದ್ದರು. ಅದೇ ಸಮಯದಲ್ಲಿ ಅಷ್ಟೆ ಅರ್ಹತೆ ಹೊಂದಿದ್ದ ಮತ್ತೊಬ್ಬ ಶಿಕ್ಷಕನಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ದೂರುದಾರ ಶಿಕ್ಷಕ ರವಿಕಿರಣ್ ನ್ಯಾ.ದತ್ತು ಬಳಿ ಮನವಿ ಮಾಡಿದರು.
ದೂರುದಾರ ಶಿಕ್ಷಕ ರವಿಕಿರಣ್ ಸಮಸ್ಯೆಯನ್ನು ಆಲಿಸಿದ ನ್ಯಾ.ದತ್ತು, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ಈ ಬಗ್ಗೆ ಪ್ರಶ್ನೆಸಿದಾಗ, ಅಧಿಕಾರಿಗಳಿಂದ ಸಮಂಜಸವಾದ ಉತ್ತರ ಬರಲಿಲ್ಲ. ಈ ವೇಳೆ ನ್ಯಾ.ದತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ತಪ್ಪಿನಿಂದ ಶಿಕ್ಷಣ ಇಲಾಖೆಗೆ ಅವಮಾನ ಮಾಡುತ್ತಿದ್ದೀರಾ. ಕೂಡಲೆ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ದೂರುದಾರನ ಬೇಡಿಕೆಯನ್ನು ಈಡೇರಿಸಬೇಕೆಂದು ಸೂಚಿಸಿದರು.
ಬೆಂಗಳೂರು ಗಂಗೇನಹಳ್ಳಿಯಲ್ಲಿ ಮೆಟ್ರೋ ಸ್ಟೇಷನ್‌ಗಾಗಿ ನನ್ನ ಮನೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಮನೆ ಬಿಟ್ಟರೆ ಬೇರೆ ಆಸ್ತಿ ಇಲ್ಲ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ದೂರುದಾರ ಎಚ್.ಕೆ.ಬಸವರಾಜ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ದತ್ತು, ಸಾರ್ವಜನಿಕರ ಹಿತಕ್ಕಾಗಿ ಒತ್ತುವರಿಯಾದರೆ ಅದನ್ನು ಬೇಡವೆಂದು ಹೇಳಲು ಬರುವುದಿಲ್ಲ. ಆದರೆ, ನಿಮಗೆ ಸಿಗಬೇಕಾದ ಪರಿಹಾರವನ್ನು ಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು. ಈ ಮಾತಿಗೆ ದೂರುದಾರರು, ಪರಿಹಾರ ಯಾವಾಗ ಸಿಗುತ್ತೋ ಗೊತ್ತಿಲ್ಲ. ಅಲ್ಲಿಯವರೆಗೂ ನಾವು ಎಲ್ಲಿರಬೇಕೆಂದು ಪ್ರಶ್ನಿಸಿದಾಗ, ಒಂದು ತಿಂಗಳೊಳಗೆ ನಿಮಗೆ ಪರಿಹಾರ ಸಿಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಹೀಗೆ ತುಮಕೂರು, ಶಿವಮೊಗ್ಗ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ದೂರುದಾರರು ತಮ್ಮ ಸಮಸ್ಯೆಗಳನ್ನು ಮಾನವ ಹಕ್ಕು ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಮುಂದಿಟ್ಟು, ಪರಿಹಾರಗಳನ್ನು ಪಡೆದರು.







