ಹರ್ಯಾಣದಲ್ಲಿ ಮುಸ್ಲಿಂ ವ್ಯಕ್ತಿಯ ಗಡ್ಡ ಕತ್ತರಿಸಿ ಹಲ್ಲೆ
ಮೂವರು ಆರೋಪಿಗಳ ಬಂಧನ

ಗುಡ್ಗಾಂವ್, ಆ.2: ಹರ್ಯಾಣದ ಗುಡ್ಗಾಂವ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಗಡ್ಡವನ್ನು ಕತ್ತರಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೂರು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಗೌರವ್ ಮತ್ತು ಎಕ್ಲೇಶ್ ಹಾಗೂ ಹರ್ಯಾಣದ ನಿತಿನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಜುಲೈ 31ರಂದು ಆರೋಪಿಗಳು ಜಫ್ರುದ್ದೀನ್ ಎಂಬವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಮೊದಲಿಗೆ ಅವರನ್ನು ನಿರ್ಲಕ್ಷಿಸಿದ ಜಫ್ರುದ್ದೀನ್, ಅವರ ಮಾತುಗಳು ಮಿತಿಮೀರಿದಾಗ ತಿರುಗಿ ಬೈದಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು ಜಫ್ರುದ್ದೀನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಹತ್ತಿರದ ಸಲೂನ್‌ಗೆ ಕರೆದೊಯ್ದು ಅವರ ಗಡ್ಡವನ್ನು ಕತ್ತರಿಸಿದ್ದಾರೆ. ಸಲೂನ್‌ನಿಂದ ಹೊರಬರುವುದಕ್ಕೂ ಮುನ್ನ ಆರೋಪಿಗಳು, ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಜಫ್ರುದ್ದೀನ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆ ಪೊಲೀಸ್ ಠಾಣೆಗೆ ತೆರಳಿದ ಜಫ್ರುದ್ದೀನ್ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.





