ಶಿಕ್ಷಕರ ನೇಮಕಾತಿಗೆ ಮೀಸಲಾತಿ ಕಡ್ಡಾಯ: ಸಚಿವ ಕೃಷ್ಣಭೈರೇಗೌಡ
ಧಾರ್ಮಿಕ ದತ್ತಿ ಇಲಾಖೆಯಡಿಯ ಶಾಲೆಗಳಿಗೆ ನಿಯಮ ಜಾರಿ

ಬೆಂಗಳೂರು, ಆ.2: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಂದ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ರೋಸ್ಟರ್ ಹಾಗೂ ಮೆರಿಟ್‌ನಡಿ ಶಿಕ್ಷಕರ ನೇಮಕಾತಿ ನಡೆಸಲು ನಿಯಮ ರೂಪಿಸಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ನಡೆಸ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸಧೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಇಲ್ಲಿಯವರೆಗೂ ಮುಜರಾಯಿ ಇಲಾಖೆಯಡಿಯ ದೇವಾಲಯಗಳ ಮೂಲಕ ನಡೆಯುತ್ತಿರುವ ಶಾಲೆಗಳಿಗೆ ಸರಕಾರದ ನಿಯಮ ಜಾರಿಯಲ್ಲಿರಲಿಲ್ಲ. ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸೇರಿದಂತೆ ಯಾವುವು ಪಾರದರ್ಶಕತೆ ಇರಲಿಲ್ಲ. ಹೀಗಾಗಿ ನಿಯಮವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ನಿಯಮ ಜಾರಿಯ ಪೂರ್ವದಲ್ಲಿ ತಕರಾರು ಅರ್ಜಿಯನ್ನು ಸ್ವೀಕಾರ ಮಾಡಿ, ಅದನ್ನು ವಿಲೇವಾರಿ ಮಾಡಿದ ನಂತರ ಕೂಲಂಕಷವಾಗಿ ಪರಿಶೀಲಿಸಿ ನಿಯಮವನ್ನು ಜಾರಿ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ 22ಶಿಕ್ಷಣ ಸಂಸ್ಥೆಗಳಿದ್ದು, ಅಲ್ಲಿ ಸರಕಾರದ ನಿಯಮ ಕಡ್ಡಾಯ ಪಾಲನೆಯಾಗಲಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಪ್ಲಾಟ್ಫಾರ್ಮ್ಸ್‌ನಲ್ಲಿ ಅಗ್ರಿ ಇನೋವೇಷನ್‌ಗಾಗಿ ಉತ್ಕೃಷ್ಟತಾ ಕೇಂದ್ರವನ್ನು ಅಂದಾಜು 15 ಕೋಟಿ ರೂ.ನಲ್ಲಿ ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ. ಆ ಮೂಲಕ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದಂತೆ ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಕೈಗಾರಿಕಾ ಇಲಾಖೆಯು ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮೆಗಾ ಯೋಜನೆ, ಅಲ್ಟ್ರಾ ಯೋಜನೆ ಹಾಗೂ ಸೂಪರ್ ಯೋಜನೆಗಳಿಗೆ ವಿಶೇಷ ಪ್ರೋತ್ಸಾಹ ಧನವನ್ನು ನೀಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸಂಪುಟ ಉಪಸಮಿತಿ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೊಪ್ಪಳ, ಗದಗ ಮತ್ತು ಚಾಮರಾಜಗರ ಸರಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ಮೈಸೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣದ ಟೆಂಡರ್ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಯಿತು ಎಂದು ಅವರು ಹೇಳಿದರು.
ಹಾಸನದಲ್ಲಿರುವ ಶ್ರೀರಾಮದೇವರ ಅಣೆಕಟ್ಟು ಶಿಥಿಲಾವಸ್ಥೆಯಲ್ಲಿದ್ದು, 122ಕೋಟಿ ರೂ. ಅಂದಾಜು ವೆಚ್ಚದ ಪರ್ಯಾಯ ಅಣೆಕಟ್ಟು ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದು ಅವರು ಹೇಳಿದರು.







