ಉಮೇಶ್ ರೆಡ್ಡಿಯಿಂದ ತಕರಾರು ಅರ್ಜಿ ಸಲ್ಲಿಕೆ: ಅರ್ಜಿ ವಿಚಾರಣೆಯನ್ನು ಆ.6ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಆ.2: ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಡವಾಗಿ ಇತ್ಯರ್ಥಪಡಿಸಿದ್ದ ರಾಷ್ಟ್ರಪತಿಗಳ ಕ್ರಮ ಪ್ರಶ್ನಿಸಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಕಾರಾಗೃಹದಲ್ಲಿರುವ ವಿಕೃತಕಾಮಿ ಉಮೇಶ್ ರೆಡ್ಡಿ ದಾಖಲಿಸಿರುವ ತಕರಾರು ಅರ್ಜಿಯ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ಆ.6ರಿಂದ ನಡೆಸಲಿದೆ.
ಉಮೇಶ್ ರೆಡ್ಡಿ ದಾಖಲಿಸಿರುವ ತಕರಾರು ಅರ್ಜಿಯು ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆ.6ರಿಂದ ಅರ್ಜಿಯ ಅಂತಿಮ ವಿಚಾರಣೆಯನ್ನು ನಿತ್ಯ ನಡೆಸುವುದಾಗಿ ನ್ಯಾಯಪೀಠ ಹೇಳಿತು.
ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಮೇಶ್ ರೆಡ್ಡಿ, ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2016ರಲ್ಲಿ ತಿರಸ್ಕಾರಗೊಂಡಿತ್ತು. ಇದನ್ನು ಪ್ರಶ್ನಿಸಿದ್ದ ಉಮೇಶ್ ರೆಡ್ಡಿ, ತನ್ನ ಕ್ಷಮಾದಾನ ಅರ್ಜಿಯನ್ನು ವಿಲೇವಾರಿ ಮಾಡಲು ರಾಷ್ಟ್ರಪತಿಗಳು 830 ದಿನ ತಡ ಮಾಡಿದ್ದಾರೆ. ನಿಯಮದ ಪ್ರಕಾರ 90 ದಿನಗಳಲ್ಲಿ ಕ್ಷಮಾದಾನ ಅರ್ಜಿ ಇತ್ಯರ್ಥಪಡಿಸಬೇಕು. ಅಲ್ಲದೆ, ನಾನು ಸತತ 18 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಅದರಲ್ಲಿ ಕಳೆದ 10 ವರ್ಷಗಳಿಂದ ಏಕಾಂತವಾಸದಲ್ಲಿದ್ದು, ಸಾಕಷ್ಟು ಮಾನಸಿಕ ಕ್ಷೋಭೆಗೆ ಗುರಿಯಾಗಿದ್ದೇನೆ. ಹೀಗಾಗಿ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಕೋರಿದ್ದ. ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಜಾರಿ ಮಾಡುವುದಕ್ಕೆ ತಡೆಯಾಜ್ಞೆ ನೀಡಿ 2016ರ ಅ.20ರಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು.







