ಪುತ್ತೂರು : ಪುನರ್ವಸತಿ ಕಾರ್ಯಕರ್ತೆಗೆ ಮಾನಸಿಕ ಕಿರುಕುಳ; ದೂರು

ಪುತ್ತೂರು, ಆ. 2: ಪಂಚಾಯತ್‌ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ವಿಕಲಚೇತನೆಯನ್ನು ವಜಾಗೊಳಿಸುವ ನಿರ್ಣಯ ಕೈಗೊಂಡು ಮಾನಸಿಕ ಹಿಂಸೆ ನೀಡಿದ ಹಾಗೂ ಪಂಚಾಯತ್ ಸದಸ್ಯರೊಬ್ಬರು ಅವಮಾನಿಸಿ ಕಿರುಕುಳ ನೀಡಿರುವುದಾಗಿ ಆರೋಪಿಸಿ ಗುರುವಾರ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಲಾಯಿತು.
ಅಸಹಾಯಕರ ಸೇವೆಯಲ್ಲಿ ನಿರತ ಸಾಮಾಜಿಕ ಕಾರ್ಯಕರ್ತೆಯಾದ ತನ್ನ ತಾಯಿ ನಯನ ರೈ ಅವರ ನೆರವಿನೊಂದಿಗೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದ ನೇಹಾ ರೈ ದೂರು ನೀಡಿದವರು. ಸುಮಾರು 30 ಮಂದಿ ವಿಕಲಚೇತನರೊಂದಿಗೆ ಆಗಮಿಸಿ ಮನವಿಯನ್ನು ಸಲ್ಲಿಸಿದರು.
ತಾನು 2017ನೇ ಮಾರ್ಚ್ ತಿಂಗಳಲ್ಲಿ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದು, ಬಿ.ಕಾಂ. ಪದವೀಧರೆಯಾದ ತಾನು ಶೇ.80 ಅಂಗವಿಕಲತೆ ಹೊಂದಿದ್ದು, ತನ್ನ ತಾಯಿಯ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಬನ್ನೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ‘ಅರಿವಿನ ಸಿಂಚನ’ ಕಾರ್ಯಕ್ರಮದಲ್ಲಿ ತಾನು ಭಾಗವಹಿಸಿದ್ದ ವೇಳೆ ಅಲ್ಲಿನ ಪಂಚಾಯತ್ ಸದಸ್ಯ ರತ್ನಾಕರ ಪ್ರಭು ಎಂಬವರು ತನ್ನನ್ನು ಅವಮಾನಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೆ ಆ ಬಳಿಕ ಎರಡನೇ ಬಾರಿ ನಡೆದ ‘ಅರಿವಿನ ಸಿಂಚನ’ ಕಾರ್ಯಕ್ರಮದಲ್ಲಿಯೂ ಮಾನಸಿಕ ನೋವುಂಟು ಮಾಡಿದ್ದಾರೆ ಎಂದು ನೇಹಾ ರೈ ಅವರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಘಟನೆಗಳಿಂದ ಮಾನಸಿಕವಾಗಿ ನೊಂದಿರುವ ತಾನು ಆ ಬಳಿಕ ಪಂಚಾಯತ್ ಕಚೇರಿಗೆ ಹೋಗದೆ ತಾಯಿಯ ನೆರವಿನೊಂದಿಗೆ ನೇರವಾಗಿ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಎಲ್ಲಾ ವಿಕಲಚೇತನರ ಬಗ್ಗೆ ವಿಚಾರಿಸಿ, ಮಾಹಿತಿ ಪಡೆದುಕೊಂಡು ಅವರಿಗೆ ಬೇಕಾದ ಗುರುತು ಚೀಟಿ, ಸರ್ಕಾರದ ಸವಲತ್ತುಗಳನ್ನು ಒದಗಿಸಿ ಕೊಡಲು ಶ್ರಮಿಸಿದ್ದೇನೆ. ಅಲ್ಲದೆ ತಾಯಿಯ ಜೊತೆ ಅಂಗನವಾಡಿಗಳಿಗೆ ಭೇಟಿಯಿತ್ತು ಸಂಬಂಧಪಟ್ಟ ವಿಕಲಚೇತನರ ಬಗ್ಗೆ ವಿಚಾರಿಸಿಕೊಂಡು ಬರುತ್ತಿದ್ದೇನೆ. ಆದರೂ ಇತ್ತೀಚೆಗೆ ಬನ್ನೂರು ಗ್ರಾಮ ಪಂಚಾಯತ್‌ನಲ್ಲಿ ತನ್ನನ್ನು ಕೆಲಸದಿಂದ ವಜಾ ಮಾಡುವ ನಿರ್ಣಯ ಕೈಗೊಂಡು ಬನ್ನೂರು ಪಂಚಾಯತ್ ಸದಸ್ಯರಲ್ಲಿ ಒಬ್ಬರಾದ ರತ್ನಾಕರ ಪ್ರಭು ತನಗೆ ಮಾನಸಿಕ ಹಿಂಸೆ ನೀಡಿದ್ದಲ್ಲದೆ ತನ್ನ ತಾಯಿಯನ್ನು ಕೂಡ ಅಪಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಅವರು ಇಲಾಖೆಯಿಂದ ನೇಮಿಸಲ್ಪಟ್ಟಿರುವ ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗವಿಕಲರಿಗೆ ಗುರುತು ಚೀಟಿ ಹಾಗೂ ಸರ್ಕಾರಿ ಸವಲತ್ತುಗಳನ್ನು ಒದಗಿಸಿಕೊಡುವುದು ಪುನರ್ವಸತಿ ಕಾರ್ಯಕರ್ತರ ಕೆಲಸ. ಆ ಕೆಲಸವನ್ನು ನಾನು ಮಾಡುತ್ತಿದ್ದೇನೆ ಆದರೆ ಯಾವಾಗಲೂ ಬಂದು ಪಂಚಾಯತ್ ಕಚೇರಿಯಲ್ಲಿ ಕುಳಿತುಕೊಳ್ಳಬೇಕು ಎನ್ನುತ್ತಿದ್ದಾರೆ. ಅಲ್ಲದೆ ಅಪಮಾನಿಸಿ ತನಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು, ಈ ಕುರಿತು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದೇನೆ. ಈ ಕೆಲಸ ನನಗೆ ಅಷ್ಟೊಂದು ಮುಖ್ಯ ಅಲ್ಲದಿದ್ದರೂ ಮುಂದೆ ಬರುವವರಿಗೆ ಹೀಗಾಗಬಾರದು ಎಂಬ ನೆಲೆಯಲ್ಲಿ ದೂರು ನೀಡಿದ್ದೇನೆ. ಇಲ್ಲಿ ನ್ಯಾಯ ಸಿಗದಿದ್ದಲ್ಲಿ ನ್ಯಾಯಾಲಯ ಮೆಟ್ಟಲೇರಿ ಕಾನೂನು ಹೋರಾಟ ಮಾಡುತ್ತೇನೆ.- ನೇಹಾ ರೈ
ನೇಹಾ ರೈ ಅವರ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಆದರೂ ಬನ್ನೂರು ಗ್ರಾಮ ಪಂಚಾಯತ್‌ನಿಂದ ವಿನಾ ಕಾರಣ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ತಿಂಗಳಿಗೆ 3 ಸಾವಿರ ರೂ. ಗೌರವಧನ ಸಿಗುವುದು. ಹೀಗಿರುವಾಗ ಎಲ್ಲಾ ದಿನಗಳಲ್ಲಿ ಪಂಚಾಯತ್ ಬರಬೇಕು ಎಂದರೆ ಹೇಗೆ ಸಾಧ್ಯ.
- ಮುತ್ತಪ್ಪ , ಪುನರ್ವತಿ ಕಾರ್ಯಕರ್ತ







