ಹನೂರು: ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮ

ಹನೂರು,ಆ.02: ಸ್ವಚ್ಚತೆ ಕೆಲಸ ಕೇವಲ ಪೌರ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನು ಸಹ ಸ್ವಚ್ಚತೆಗೆ ಆದ್ಯತೆ ನೀಡಿದಾಗ ಮಾತ್ರ ಸ್ವಚ್ಚ ಭಾರತ್ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತದೆ ಎಂದು ಗೋಪಿಶೆಟ್ಟಿಯೂರು ಗ್ರಾಮ ಜೈ ಭೀಮ್ ಯುವಜನ ಕಲಾ ಸಂಘದ ಅಧ್ಯಕ್ಷ ಸುಂದರೇಶ್ ಹೇಳಿದರು.
ಹನೂರು ತಾಲೂಕು ರಾಮಾಪುರ ಹೋಬಳಿ ಗೋಪಿಶೆಟ್ಟಿಯೂರು ಗ್ರಾಮದ ಜೈ ಭೀಮ್ ಯುವಜನ ಕಲಾ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಚ ಭಾರತ್ ಮಿಷನ್ ಅಭಿಯಾನ ಯಶಸ್ವಿಯಾಗಲು ಪಂಚಾಯತ್ ಅಧಿಕಾರಿಗಳು, ವಿವಿಧ ಪ್ರಗತಿ ಪರ ಸಂಘಟನೆಗಳು ಸೇರಿದಂತೆ ಪ್ರತಿಯೊಬ್ಬರ ಪಾತ್ರ ಅಮೂಲ್ಯವಾಗಿರುತ್ತದೆ. ಪ್ರತಿ ನಿತ್ಯ ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಚತೆಯಿಂದ ಕೂಡಿದರೆ ಆರೋಗ್ಯಯುತವಾದ ಬದುಕು ಕಂಡುಕೊಳ್ಳವುದು ಸಾಧ್ಯ. ಇಲ್ಲದಿದ್ದರೆ ನಾನಾ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಲ್ಲೂ ಸ್ವಚ್ಚತೆಯ ಅರಿವು ಇರಬೇಕು. ಹಾಗೆಯೇ ಇತರರಿಗೂ ಅದರ ಬಗ್ಗೆ ಅರಿವು ಮೂಡಿಸಬೇಕು. ಎಂದರು.
ಈ ಸಂದರ್ಭ ರಾಮಾಪುರ, ಗೋಪಿಶೆಟ್ಟಿಯೂರು ಗ್ರಾಮದ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಸೇರಿದಂತೆ ಬಸ್ ನಿಲ್ದಾಣ ಮುಖ್ಯ ರಸ್ತೆಗಳಲ್ಲಿ ಸ್ವಚ್ಚತೆ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಡಾ.ಪ್ರಕಾಶ್, ಸಬ್‍ಇನ್ಸ್ ಪೆಕ್ಟರ್ ಪ್ರಭಾಕರ್ ಹಾಗೂ ಸಂಘದ ಸದಸ್ಯರು ಸಾಥ್ ನೀಡಿದರು.





