ದಾವಣಗೆರೆ: ಪ್ರತ್ಯೇಕ ರಾಜ್ಯದ ಬೇಡಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ದಾವಣಗೆರೆ,ಆ.02: ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಪಾಲಿಕೆ ಎದುರು ಕರವೇ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಮಖಂಡರು, ಅನೇಕ ಕ್ಷೇತ್ರಗಳ ಪ್ರತಿನಿಧಿಗಳು, ಸರ್ಕಾರಿ ನೌಕರರ ಸಂಘದವರೂ ಸೇರಿದಂತೆ ಅನೇಕರು ಭಾಗವಹಿಸುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಗೊಳಿಸಿ, ಅಖಂಡ ಕರ್ನಾಟಕ ಉಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಕರ್ನಾಟಕದ ಏಕೀಕರಣಕ್ಕಾಗಿ ದುಡಿದವರು, ತ್ಯಾಗ ಬಲಿದಾನ ಮಾಡಿದವರು ಅಸಂಖ್ಯಾತರಿದ್ದಾರೆ. ಕೆಂಗಲ್ ಹನುಮಂತಯ್ಯ, ಆಲೂರು ವೆಂಕಟರಾಯರು, ಬಳ್ಳಾರಿ ರಂಜಾನ್ ಸಾಬ್, ಕೆ.ಸಿ. ರೆಡ್ಡಿ ಸೇರಿದಂತೆ ಅನೇಕ ಮಹನೀಯರು ನಾಡಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು, ಹೋರಾಡಿದ್ದಾರೆ ಎಂದ ಅವರು, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹೋರಾಡಿದ ಇಂತಹ ಹಿರಿಯರ ತ್ಯಾಗ, ಬಲಿದಾನದ ಅರಿವಿಲ್ಲದ ಸಿಎಂ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ. ಕುಮಾರಸ್ವಾಮಿ ಹೇಳಿಕೆಯಿಂದಲೇ ಇಂದು ರಾಜ್ಯದ ಮಠಾಧೀಶರು, ರಾಜಕಾರಣಿಗಳು, ರೈತ ಮಖಂಡರು, ರೈತರು, ಜನತೆ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕೆಲವರ ರಾಜಕೀಯ ಹಿತಾಸಕ್ತಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆಯೇ ಹೊರತು, ನಮ್ಮ ಜಿಲ್ಲೆ, ನಮ್ಮ ಭಾಗ, ನಾಡಿನ ಇಂದಿನ ಸಮಸ್ಯೆ ಪರಿಹರಿಸುವಂತೆ ನಡೆಸುತ್ತಿರುವ ಹೋರಾಟ ಇದಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯೂ ಕರ್ನಾಟಕದ ಸಮಗ್ರತೆಗೆ ಧಕ್ಕೆ ತರುವಂತಿದೆ. ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ಆದರೆ, ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ನಾಡಿನ ಅಭಿವೃದ್ಧಿಗೆ ಕರವೇ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳೂ ತಕ್ಷಣ ಮುಂದಾಗಬೇಕು. ನಂಜುಂಡಪ್ಪ ವರದಿಯಲ್ಲಿ ನೀಡಲಾದ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಎಲ್ಲಾ ಸೌಲಭ್ಯ ಕಲ್ಪಿಸಬೇಕು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಕ್ಕಿರುವ 371 ಜೆ ಸೌಕರ್ಯದಂತೆ ಕೇಂದ್ರದ ಎಲ್ಲಾ ಇಲಾಖೆ ಹುದ್ದೆಗಳಲ್ಲಿ ಕನ್ನಡಿಗರಿಗೂ ಮೀಸಲಾತಿ ಕಲ್ಪಿಸಲಿ ಎಂದು ಒತ್ತಾಯಿಸಿದರು.
ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ಮಹದಾಯಿ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಪರಿಹರಿಸುವ ಕೆಲಸವಾಗಬೇಕು. ಬೆಳಗಾವಿ, ಕಲ್ಬುರ್ಗಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿದರು.
ಧರಣಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಲೇಶಪ್ಪ, ಕನ್ನಡ ಪರ ಹೋರಾಟಗಾರರಾದ ಟಿ.ಶಿವಕುಮಾರ, ಕೆ.ಜಿ. ಶಿವಕುಮಾರ, ಕಸಾಪದ ಬಿ.ದಿಳ್ಯಪ್ಪ, ಎನ್.ಎಸ್.ರಾಜು, ಕೆ.ಟಿ. ಗೋಪಾಲಗೌಡ, ಹನುಮಂತಪ್ಪ, ಬಸಮ್ಮ, ಡಿ.ಮಲ್ಲಿಕಾರ್ಜುನ, ಐಗೂರು ಸುರೇಶ, ಎ.ವೈ. ಕೃಷ್ಣಮೂರ್ತಿ, ಡಿ.ಎಂ.ಮಂಜುನಾಥಯ್ಯ, ಎ.ಎಚ್.ತಿಮ್ಮೇಶ, ಬಸವರಾಜ, ಹುಲಿಯಪ್ಪನವರ, ಎನ್.ಟಿ.ಹನುಮಂತಪ್ಪ ಮತ್ತಿತರರಿದ್ದರು.







