ಆ.6: ರಾಜ್ಯಮಟ್ಟದ ದಲಿತ ಹಕ್ಕುಗಳ ರಕ್ಷಣಾ ಮಹಾರ್ಯಾಲಿ
ಉಡುಪಿ, ಆ.2: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಆಶ್ರಯದಲ್ಲಿ ದಲಿತ ಹಕ್ಕುಗಳ ರಕ್ಷಣಾ ಮಹಾ ರ್ಯಾಲಿ ಆ.6ರ ಸೋಮವಾರ ಅಪರಾಹ್ನ 2 ಗಂಟೆಗೆ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಲಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಇಲ್ಲಿ ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಪರಾಹ್ನ 12ಗಂಟೆಗೆ ದಲಿತ ಹಕ್ಕುಗಳ ರಕ್ಷಣಾ ಮಹಾರ್ಯಾಲಿ ಬೆಂಗಳೂರಿನ ಪುರಭವನ ದಿಂದ ಹೊರಟು ಸ್ವಾತಂತ್ರ ಉದ್ಯಾನವನ ತಲುಪಲಿದೆ. ಅಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ನಾಡಿನ ಪ್ರಮುಖ ಪ್ರಗತಿಪರರು ಭಾಗವಹಿಸಲಿದ್ದಾರೆ ಎಂದರು.
ದೇಶದ ಶ್ರಮಜೀವಿ ದಲಿತರ ಮೇಲಾಗುತ್ತಿರುವ ದೈಹಿಕ ಹಲ್ಲೆ, ಕೊಲೆ, ಸುಲಿಗೆ, ದಲಿತ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಳ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ರಕ್ಷಣೆಗಾಗಿರುವ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ನಡೆದಿರುವ ಪ್ರಯತ್ನ, ಶೋಷಿತ ಸಮುದಾಯಗಳ ವಿರುದ್ಧ ಇತರ ಜಾತಿಗಳನ್ನು ಎತ್ತಿ ಕಟ್ಟುವ ಹುನ್ನಾರ, ಒಡೆದು ಆಳುವ ತಂತ್ರ, ಅಲ್ಪಸಂಖ್ಯಾತ ಮುಸ್ಲಿಂ, ಕ್ರೈಸ್ತರ ವಿರುದ್ಧ ಕೋಮು ದ್ವೇಷ ಬಿತ್ತುವ ಸಂಚು, ದೇಶಭಕ್ತಿ, ಗೋರಕ್ಷಣೆ ಹೆಸರಿನಲ್ಲಿ ಹಾಡುಹಗಲೇ ನಡೆದಿರುವ ಕೊಲೆಗಳನ್ನು ಖಂಡಿಸಿ ಈ ರ್ಯಾಲಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತದಿಂದ ಬರುವ ಲಕ್ಷಕ್ಕೂ ಅಧಿಕ ದಲಿತರು, ಕಾರ್ಯಕರ್ತರು ಭಾಗವಹಿಸಲಿದ್ದು, ಉಡುಪಿಯಿಂದ 500 ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸುಂದರ ಮಾಸ್ತರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್.ಪ್ರಸಾದ್, ಸಂಘಟನಾ ಸಂಚಾಲಕ ಗೋಪಾಲಕೃಷ್ಣ, ತಾಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು, ಪಡುಬಿದ್ರಿ ಪ್ರದಾನ ಸಂಚಾಲಕ ಲೋಕೇಶ್ ಪಡುಬಿದ್ರಿ, ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಉಪಸ್ಥಿತರಿದ್ದರು.







