ಅಕ್ರಮ ಜಾನುವಾರು ಸಾಗಾಟ: ನಾಲ್ವರ ಬಂಧನ

ಮಂಗಳೂರು, ಆ. 2: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ವಶಕ್ಕೆ ಪಡೆದು, ದನಕರು ಸೇರಿದಂತೆ ಲಾರಿ-ಕಾರನ್ನು ಗುರುವಾರ ಬೆಳಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಲಾರಿ ಚಾಲಕ, ಕೇರಳದ ಸಿ.ಎ. ನಯಿಮುದ್ದೀನ್, ಲಾರಿಯಲ್ಲಿದ್ದ ಕೇರಳದ ರಾಧಾಕೃಷ್ಣನ್, ದನಕರು ಸಾಗಾಟಕ್ಕೆ ಸಹಕರಿಸಿದ ಕಂಕನಾಡಿ ನಿವಾಸಿಗಳಾದ ಸುಭಾಷ್ ಶೆಟ್ಟಿ, ಸತೀಶ್‌ಕುಮಾರ್ ಎಂಬವರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಲಾರಿಯಲ್ಲಿದ್ದ 13 ದನಕರುಗಳು ಸೇರಿದಂತೆ ಸಾಗಾಟಕ್ಕೆ ಬಳಿಸಿದ ಲಾರಿ, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಉಮೇಶ್‌ಕುಮಾರ್ ಎಂ.ಎನ್. ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





