ಅಪಘಾತದಿಂದ ಜಿಂಕೆಗೆ ಗಾಯ: ಮಾನವೀಯತೆ ಮೆರೆದ ಸಚಿವ ಸಾ.ರಾ.ಮಹೇಶ್

ಮಡಿಕೇರಿ ಆ.3 : ಹೆದ್ದಾರಿ ಮಧ್ಯೆ ಗಾಯಗೊಂಡು ಬಿದ್ದಿದ್ದ ಜಿಂಕೆಯೊಂದಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ನೀರು ಕುಡಿಸಿ, ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ ಕುಶಾಲನರದ ಬಳಿ ವಾಹನ ಢಿಕ್ಕಿಯಾಗಿ ಗಾಯಗೊಂಡು ಬಿದ್ದಿದ್ದ ಜಿಂಕೆಯನ್ನು ಕಂಡು ಕಾರು ನಿಲ್ಲಿಸಿದ ಸಚಿವರು ಮರುಗಿದರು. ನರಳುತ್ತಿದ್ದ ವನ್ಯಜೀವಿಗೆ ನೀರು ಕುಡಿಸಿ ಉಪಚರಿಸಿ, ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳಿದ ಟೂರಿಸ್ಟ್ ವಾಹನವೊಂದು ಹೆದ್ದಾರಿ ರಸ್ತೆ ದಾಟುತ್ತಿದ್ದ ಜಿಂಕೆಗೆ ಢಿಕ್ಕಿಯಾಗಿ ನರಳುತ್ತಿದ್ದ ದೃಶ್ಯ ಸಚಿವರಿಗೆ ಗೋಚರಿಸಿದೆ. ತನ್ನ ವಾಹನವನ್ನು ನಿಲ್ಲಿಸಲು ಚಾಲಕನಿಗೆ ಸೂಚನೆ ನೀಡಿದ ಸಚಿವರು ರಸ್ತೆಯಲ್ಲಿ ಗಾಯಗೊಂಡು ನರಳುತ್ತಿದ್ದ ಜಿಂಕೆಯನ್ನು ಗಮನಿಸಿ ನೀರು ನೀಡಿ ಆರೈಕೆ ಮಾಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವನ್ಯಜೀವಿ ತಜ್ಞರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ನೀಡಿದರು. ತೀವ್ರವಾಗಿ ಗಾಯಗೊಂಡಿರುವ ಜಿಂಕೆಗೆ ಚಿಕಿತ್ಸೆ ನೀಡಿ ಸ್ಥಳೀಯ ಕಾವೇರಿ ನಿಸರ್ಗಧಾಮಕ್ಕೆ ಸ್ಥಳಾಂತರಿಸಲಾಯಿತು. ಜಿಂಕೆ ಚೇತರಿಸಿಕೊಳ್ಳುತ್ತಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮಾಹಿತಿ ನೀಡಿದ್ದಾರೆ.





