ಅಲೆಮಾರಿ ಆಯೋಗ: ಕಾರ್ಯಸಾಧ್ಯ ವರದಿ ಸಲ್ಲಿಕೆಗೆ ಸಮಿತಿ ರಚಿಸಲು ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಆ.03: ಅಲೆಮಾರಿ ಆಯೋಗ ರಚನೆಗೆ ಸಂಬಂಧಿಸಿದಂತೆ ವಿಸ್ತೃತ ಕಾರ್ಯಸಾಧ್ಯ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.
ರಾಜ್ಯ ಅಲೆಮಾರಿ ಬುಡಕಟ್ಟು ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಇಂದು ಭೇಟಿ ಮಾಡಿ ಚರ್ಚಿಸಿದರು. ಅಲೆಮಾರಿಗಳ ಆಯೋಗ ರಚನೆಗೆ ರಾಜ್ಯದಲ್ಲಿರುವ ಅಲೆಮಾರಿ, ಬುಡಕಟ್ಟು ಸಮುದಾಯದವರ ಜನಸಂಖ್ಯೆ, ಸ್ಥಿತಿಗತಿಯ ಸಂಪೂರ್ಣ ವಿವರಗಳನ್ನು ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಅಲೆಮಾರಿಗಳ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಕೆಲಸಕ್ಕೆ ಅನುದಾನದ ಕೊರತೆ ಇಲ್ಲ ಎಂದ ಮುಖ್ಯಮಂತ್ರಿಗಳು ಪ್ರತಿ ಅಲೆಮಾರಿ ಕುಟುಂಬವೂ ನೆಲೆನಿಲ್ಲುವಂತೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಎಲ್ಲ ಕೆಲಸಗಳು ಸಮರೋಪಾದಿಯಲ್ಲಿ ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದರು.
ಅಲೆಮಾರಿ ಸಮುದಾಯಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಲ್ಲಿ ಹಂಚಿಹೋಗಿದ್ದು, ಗೊಂದಲ ಸೃಷ್ಟಿಯಾಗಿದೆ. ಜಾತಿ ಪ್ರಮಾಣ ಪತ್ರ ದೊರಕುವುದು ಕಷ್ಟವಾಗಿರುವುದರಿಂದ ಸರ್ಕಾರದ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ತಿಳಿಸಿದರು. ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ನಿವಾರಿಸಲು ಹಾಗೂ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆಯಿತ್ತರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹಶೀನ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ವಿಲಾಸ್ ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸುಲು, ರಾಜ್ಯ ಅಲೆಮಾರಿ ಬುಡಕಟ್ಟು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.







