ತಾಯಿಯನ್ನು ನೋಡಿಕೊಳ್ಳಲು ಸಿದ್ದ: ನ್ಯಾಯಾಲಯಕ್ಕೆ ತಿಳಿಸಿದ ಅಜಯ್ ಸಿಂಗ್

ಭೋಪಾಲ, ಆ. 3: ಕುಟುಂಬದ ಬಂಗ್ಲೆಯಿಂದ ತಾಯಿಯನ್ನು ಹೊರ ಹಾಕಿದ ಆರೋಪಕ್ಕೆ ಒಳಗಾಗಿರುವ ಮಧ್ಯಪ್ರದೇಶ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಅಜಯ್ ಸಿಂಗ್, ತಾಯಿ ತನ್ನೊಂದಿಗೆ ಜೀವಿಸಬಹುದು, ಅವರನ್ನು ನೋಡಿಕೊಳ್ಳಲು ತಾನು ಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಕ್ಕಳಾದ ಅಜಯ್ ಸಿಂಗ್ ಹಾಗೂ ಅಭಿಮನ್ಯು ಸಿಂಗ್ ತನ್ನನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಹಾಗೂ ತನ್ನ ಪತಿ ನಿರ್ಮಿಸಿದ ಕೆರ್ವಾ ಕೋಟಿ ಬಂಗ್ಲೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರದ ಮಾಜಿ ಸಚಿವ, ದಿವಂಗತ ಅರ್ಜುನ್ ಸಿಂಗ್ ಅವರ ಪತ್ನಿ ಸರೋಜಾ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ‘‘ಅವರು ನಮ್ಮೊಂದಿಗೆ ಕೆರ್ವಾ ಕೋಟಿಯಲ್ಲಿ ಅಥವಾ ಯಾವುದೇ ಇತರ ಬಂಗ್ಲೆಯಲ್ಲಿ ವಾಸಿಸಬಹುದು. ನಾನು ಅವರನ್ನು ನೋಡಿಕೊಳ್ಳಲು ಸಿದ್ದ.’’ ಎಂದು ಅಜಯ್ ಸಿಂಗ್ ನ್ಯಾಯಾಂಗ ದಂಡಾಧಿಕಾರಿ ಗೌರವ್ ಪ್ರಗ್ಯಾನನ್‌ಗೆ ಗುರುವಾರ ಅಫಿದಾವಿತ್ ಸಲ್ಲಿಸಿದ್ದಾರೆ. ಅಫಿದಾವಿತ್ ಅನ್ನು ದಾಖಲಿಸಿಕೊಂಡಿರುವ ದಂಡಾಧಿಕಾರಿ ಮುಂದಿನ ವಿಚಾರಣೆಯನ್ನು ಆಗಸ್ಟ್ 7ರಂದು ನಿಗದಿಪಡಿಸಿದ್ದಾರೆ. ಸರೋಜಾ ಸಿಂಗ್ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.





