ವಿದ್ಯಾರ್ಥಿಗಳಿಗೆ ಸಾಹಿತ್ಯ ಅಧ್ಯಯನ ಅತ್ಯಗತ್ಯ: ಹಿರೇಮಗಳೂರ ಕಣ್ಣನ್

ಚಿಕ್ಕಮಗಳೂರು, ಆ.3: ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಸಾಹಿತ್ಯದ ಪುಸ್ತಕಗಳನ್ನೂ ಓದಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ಶ್ರೀ ವೆಂಕಟೇಶ್ವರ ಪ್ರಕಾಶನ ಮತ್ತು ಐಡಿಎಸ್‍ಜಿ ಕಾಲೇಜಿನ ಕನ್ನಡ ವಿಭಾಗ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಹಿತಿ ದಿ. ಪ್ರೊ.ಚಂದ್ರಯ್ಯನಾಯ್ಡು ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಎಚ್.ಎಂ.ಮಹೇಶ್ ಅವರು ಬರೆದಿರುವ ಚಂದ್ರಬಿಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯದ ಕೃತಿಗಳನ್ನು ಮಸ್ತಕದ ಮೇಲಿಟ್ಟು ಪೂಜಿಸುವುದರಿಂದ ಯಾವುದೇ ಲಾಭವಿಲ್ಲ ಅದನ್ನು ತಲೆಯೊಳಗೆ ತುಂಬಿಕೊಂಡಾಗ ಮಾತ್ರ ಜ್ಞಾನದ ವಿಸ್ತಾರವಾಗುತ್ತದೆ ಎಂದರು.
ಜಗತ್ತಿನಲ್ಲಿ ಎಲ್ಲವೂ ನಾಶವಾಗುತ್ತದೆ. ಆದರೆ ಒಂದು ಮಾತ್ರ ನಾಶವಾಗುವುದಿಲ್ಲ ಅದು ಅಕ್ಷರ ಹಾಗಾಗಿ ಎಲ್ಲರೂ ಸಾಕ್ಷರರಾಗಬೇಕು ಎಂದ ಅವರು, ಎಲ್ಲಾ ದೇಶಕ್ಕೆ ಡೇಟ್ ಆಫ್ ಬರ್ತ್ ಇದೆ ಆದರೆ ಭಾರತಕ್ಕೆ ಡೇಟ್ ಆಫ್ ಬರ್ತ್ ಇಲ್ಲ. ಹಾಗಾಗಿ ಅದಕ್ಕೆ ಡೇಟ್ ಆಫ್ ಡೆತ್ ಇಲ್ಲ ಇದಕ್ಕೆ ಮೂಲ ಕಾರಣ ನಮ್ಮ ಸಾಹಿತ್ಯ, ಸಂಗೀತ, ಕಲೆ ಮತ್ತು ಪ್ರಾಚೀನ ಸಂಸ್ಕೃತಿ ಮತ್ತು ಸಂಸ್ಕಾರ ಎಂದು ತಿಳಿಸಿದರು.
ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ ಕೃತಿಯ ಕುರಿತು ಮಾತನಾಡಿ, ತಿಳುವಳಿಕೆಯನ್ನು ನಡವಳಿಕೆಯನ್ನಾಗಿ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಹಿತಿ ಚಂದ್ರಯ್ಯನಾಯ್ಡು ಅವರ ಕೃತಿಗಳು ಉತ್ತರ ನೀಡುತ್ತವೆ ಎಂದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತಿ ಪ್ರೊ.ಚಂದ್ರಯ್ಯ ನಾಯ್ಡು ಅವರು ಅನೇಕ ಸಾಧಕರ ಬಗ್ಗೆ ಪುಸ್ತಕ ಬರೆದಿದ್ದರು, ಇದೀಗ ಅವರ ಬಗ್ಗೆ ಪುಸ್ತಕವನ್ನು ಹೊರ ತಂದಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.
ಶ್ರೀ ವೆಂಕಟೇಶ್ವರ ಪ್ರಕಾಶನದ ಮುಖ್ಯಸ್ಥೆ ವಾಣಿ ನಾಯ್ಡು ಪ್ರಾಸ್ತಾವಿಕವಾಗಿ ಮಾತನಾಡಿ, ಐಡಿಎಸ್‍ಜಿ ಕಾಲೇಜು ಸಾಹಿತಿ ಪ್ರೊ|| ಚಂದ್ರಯ್ಯನಾಯ್ಡು ಅವರು ಓದಿದ ಮತ್ತು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಕಾಲೇಜು ಹಾಗಾಗಿ ಅವರಿಗೆ ಈ ಕಾಲೇಜಿನ ಬಗ್ಗೆ ಬಹಳಷ್ಟು ಒಲವು ಮತ್ತು ಅಭಿಮಾನವಿತ್ತು. ಹೀಗಾಗಿ ಅವರ ಕೃತಿಯನ್ನು ಇದೇ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಲೇಖಕ ಡಾ. ಹೆಚ್.ಎಂ.ಮಹೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಹೆಚ್.ಎಂ. ಮಹೇಶ್ ಮಾತನಾಡಿ, ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯದ ಶ್ರೀಮಂತಿಕೆ ಜನರಿಗೆ ಪರಿಚಯವಾಗಬೇಕಾದರೆ ಜಿಲ್ಲೆಯಲ್ಲಿ ಅಜ್ಞಾತವಾಗಿ ಉಳಿದಿರುವ ಅನೇಕ ಸಾಹಿತಿಗಳ ಪರಿಚಯವಾಗಬೇಕು. ಹಾಗಾಗಿ ತಾವು ಸಾಹಿತಿ ಚಂದ್ರಯ್ಯ ನಾಯ್ಡು ಅವರ ಕೃತಿಗಳನ್ನು ಸಂಶೋಧನಾ ಪ್ರಬಂಧಕ್ಕಾಗಿ ಆಯ್ದು ಕೊಂಡಿದ್ದೇನೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದೂರು ಅಶೋಕ್ ಇದ್ದರು. ವಿದ್ಯಾರ್ಥಿ ಸುಜಯ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಸುಂದರೇಶ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಧಾ ವಂದಿಸಿದರು.







