3ನೇ ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಗೆ ಹೆರಿಗೆ ರಜೆ ನಿರಾಕರಣೆ ಸಂವಿಧಾನಬಾಹಿರ: ಹೈಕೋರ್ಟ್

ನೈನಿತಾಲ್, ಆ. 4: ಮೂರನೇ ಮಗುವನ್ನು ಪಡೆಯಲು ಮುಂದಾಗುವ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ಸೌಲಭ್ಯ ನಿರಾಕರಿಸುವ ಉತ್ತರಾಖಂಡ ಸರ್ಕಾರದ ನಿಯಮವನ್ನು ಅಲ್ಲಿನ ಹೈಕೋರ್ಟ್ "ಸಂವಿಧಾನಬಾಹಿರ" ಎಂದು ಘೋಷಿಸಿದೆ. ಈ ನಿಯಮಾವಳಿ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಉತ್ತರಾಖಂಡ ಅಳವಡಿಸಿಕೊಂಡ ಉತ್ತರ ಪ್ರದೇಶ ಮೂಲ ನಿಯಮಾವಳಿಗಳ 153ನೇ ನಿಯಮವು ನ್ಯಾಯಸಮ್ಮತ ಹಾಗೂ ಮಾನವೀಯ ಉದ್ಯೋಗ ಸ್ಥಿತಿ ಹಾಗೂ ಹೆರಿಗೆ ಪರಿಹಾರವನ್ನು ಖಾತ್ರಿಪಡಿಸುವ ಕೇಂದ್ರದ ಕಾಯ್ದೆ ಹಾಗೂ ಸಂವಿಧಾನದ 42ನೇ ವಿಧಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ರಾಜೀವ್ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ನಿಮಯಾವಳಿಯು ಹೆರಿಗೆ ಸೌಲಭ್ಯ ಕಾಯ್ದೆ- 1961ಕ್ಕೆ ಕೂಡಾ ವಿರುದ್ಧವಾಗಿದ್ದು, ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗೆ ಹೆರಿಗೆ ರಜೆ ಸೌಲಭ್ಯವನ್ನು ಈ ಕಾಯ್ದೆ ನಿಷೇಧಿಸಿಲ್ಲ. ಈ ಕಾಯ್ದೆ 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಎಲ್ಲ ಖಾಸಗಿ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. 2017ರಲ್ಲಿ ಹೆರಿಗೆ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತಂದು ವೇತನ ಸಹಿತ ಹೆರಿಗೆ ರಜೆಯನ್ನು ಮಹಿಳೆಯರಿಗೆ 12 ವಾರದಿಂದ 26 ವಾರಕ್ಕೆ ಹೆಚ್ಚಿಸಿದೆ. ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಗೆ 12 ವಾರಗಳ ರಜೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಹಲ್ದ್‌ವಾನಿ ನಿವಾಸಿ ಊರ್ಮಿಳಾ ಮಸಿಹ್ ಎಂಬ ಮಹಿಳೆಗೆ ಹೆರಿಗೆ ರಜೆಯನ್ನು ನಿರಾಕರಿಸಲಾಗಿದ್ದು, ಆಕೆ 2015ರಲ್ಲಿ ಪಡೆದ ರಜೆಗೆ ವೇತನ ಪಾವತಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.







