ರೈತರಿಗೆ ಯೋಜನೆಯ ಸೌಲಭ್ಯ ತಲುಪಿಸಿ: ಶಾಸಕ ಗೌರಿಶಂಕರ್
ತುಮಕೂರು,ಆ.4: ರೈತರು ಹಾಗೂ ಬಡವರ ಅಭಿವೃದ್ಧಿಗೆ ರಾಜ್ಯ ಸರಕಾರ ಅನುಷ್ಟಾನಗೊಳಿಸಿರುವ ಯೋಜನೆಗಳ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತುಮಕೂರು ತಾಲೂಕಿನ ಗೂಳೂರಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪಂಪ್‍ಸೆಟ್ ವಿತರಿಸಿ ಮಾತನಾಡುತ್ತಿದ್ದ ಅವರು, ವೃದ್ಧಾಪ್ಯವೇತನ ಸೇರಿದಂತೆ ಸರಕಾರದ ಹಲವಾರು ಯೋಜನೆಗಳ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ತಲುಪಿಸಬೇಕು. ಸರಕಾರಿ ಕಚೇರಿಗಳಿಗೆ ಅಲೆಯದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಗ್ರಾಮಾಂತರ ಜನರ ಸಮಸ್ಯೆಗಳನ್ನು ಆಲಿಸಲು ತಿಂಗಳಿಗೊಮ್ಮೆ ಜನತಾದರ್ಶನ ಮಾಡಲಾಗುವುದು ಎಂದ ಅವರು, ಕ್ಷೇತ್ರದಲ್ಲಿ ಗಂಗಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವವರ ಪಟ್ಟಿಯನ್ನು ತಯಾರಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಾರಂಭದಲ್ಲಿ 67 ಮಂದಿ ಫಲಾನುಭವಿಗಳಿಗೆ ಪಂಪ್‍ಸೆಟ್‍ನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪರಿಶಿಷ್ಟ ಜಾತಿ ಅಭಿವೃದ್ದಿ ನಿಗಮ, ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮಗಳ ಅಧಿಕಾರಿಗಳು ಉಪಸ್ಥಿತರಿದ್ದರು.