ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕೆ.ಎಂ. ಜೋಸೆಫ್ ನೇಮಕ

ಹೊಸದಿಲ್ಲಿ, ಆ.4: ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಕೆ.ಎಂ ಜೋಸೆಫ್ ಸೇರಿದಂತೆ ಮೂವರು ನ್ಯಾಯಾಧೀಶರನ್ನು ಶನಿವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಕೆ.ಎಂ ಜೋಸೆಫ್ ಜೊತೆಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಹಾಗೂ ಒಡಿಶಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ವಿನೀತ್ ಸರನ್ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.
ಅವರ ನೇಮಕ ಪತ್ರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ರಾತ್ರಿ ಸಹಿ ಹಾಕಿದ್ದರು. ನ್ಯಾಯಾಧೀಶ ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ನ್ಯಾಯಾಂಗದ ಮಧ್ಯೆ ಕೆಲವು ಸಮಯದಿಂದ ಸಂಘರ್ಷವೇರ್ಪಟ್ಟಿತ್ತು. ಮೂವರು ನ್ಯಾಯಾಧೀಶರ ನೇಮಕದಿಂದ ಸದ್ಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 25ಕ್ಕೇರಿದೆ. ಆದರೆ ಇನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ಆರು ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ. ಇಂದಿರಾ ಬ್ಯಾನರ್ಜಿಯವರು ಸರ್ವೋಚ್ಚ ನ್ಯಾಯಾಲಯಕ್ಕೆ ಆಯ್ಕೆಯಾದ ಎಂಟನೇ ಮಹಿಳಾ ನ್ಯಾಯಾಧೀಶರಾಗಿದ್ದಾರೆ. ಅವರನ್ನು ಫೆಬ್ರವರಿ 5, 2002ರಲ್ಲಿ ಕೊಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಯಿತು. ನಂತರ ಆಗಸ್ಟ್ 8,2016ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಎಪ್ರಿಲ್ 5, 2017ರಲ್ಲಿ ಬ್ಯಾನರ್ಜಿಯವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಯಿತು. ಅಂದಿನಿಂದ ಅವರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಯಾಧೀಶ ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಈ ವರ್ಷ ಜನವರಿ ಹತ್ತರಂದು ಭಾರತೀಯ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತಂಡ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರಕಾರ, ಜೋಸೆಫ್ ಅಗತ್ಯ ಅರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಿ ಈ ಶಿಫಾರಸನ್ನು ಮರುಪರಿಶೀಲಿಸುವಂತೆ ಮರಳಿಸಿತ್ತು. ಶಿಫಾರಸಿನಲ್ಲಿ ಹಲವು ಉಚ್ಚ ನ್ಯಾಯಾಲಯಗಳನ್ನು ಪ್ರತಿನಿಧಿಸಲಾಗಿಲ್ಲ ಮತ್ತು ಜೋಸೆಫ್ ಅವರ ಭಡ್ತಿಯು ಪ್ರಾದೇಶಿಕ ಪ್ರತಿನಿಧಿತ್ವದ ತತ್ವಕ್ಕೆ ವಿರುದ್ಧವಾಗಲಿದೆ ಎಂದು ಕೇಂದ್ರ ವಾದಿಸಿತ್ತು. ಮೇ 16ರಂದು ನ್ಯಾಯಾಧೀಶರ ತಂಡ ಮತ್ತೊಮ್ಮೆ ನ್ಯಾಯಾಧೀಶ ಜೋಸೆಫ್ ಅವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಸೂಚಿಸಿತು. ಆದರೆ ಈ ಬಗ್ಗೆ ಸರಕಾರಕ್ಕೆ ಶಿಫಾರಸನ್ನು ಜುಲೈಯಲ್ಲಿ ಕಳುಹಿಸಿತ್ತು.







