ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣ: ಆಗಸ್ಟ್ 7ಕ್ಕೆ ಇಬ್ಬರು ಮಾಜಿ ಪೊಲೀಸರ ಖುಲಾಸೆ ಅರ್ಜಿಯ ತೀರ್ಪು

ಅಹಮದಾಬಾದ್, ಆ.4: ಇಶ್ರಾತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತಮ್ಮನ್ನು ಕೈಬಿಡಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ ಡಿ.ಜಿ ವಂಝಾರ ಮತ್ತು ಎನ್.ಕೆ ಅಮಿನ್ ಮಾಡಿರುವ ಮನವಿಯ ಆದೇಶವನ್ನು ಸಿಬಿಐ ವಿಶೇಷ ನ್ಯಾಯಾಲಯ ಆಗಸ್ಟ್ 7ರಂದು ನೀಡುವ ಸಾಧ್ಯತೆಯಿದೆ.
ಶನಿವಾರ ಮನವಿ ಕುರಿತ ತೀರ್ಪನ್ನು ನೀಡುವ ನಿರೀಕ್ಷೆಯಿದ್ದರೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಕೆ ಪಾಂಡ್ಯ ತೀರ್ಪನ್ನು ಆಗಸ್ಟ್ 7ಕ್ಕೆ ಕಾದಿರಿಸಿದರು. ನ್ಯಾಯಾಲಯವು, ಆರೋಪಿತ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳು, ವಂಝಾರ ಮನವಿಯನ್ನು ಪ್ರಶ್ನಿಸಿರುವ ಸಿಬಿಐ ಮತ್ತು ಇಶ್ರತ್ ಜಹಾನ್‌ರ ತಾಯಿ ಶಮೀಮ ಕೌಸರ್ ಅವರ ವಾದಗಳ ಆಲಿಕೆಯನ್ನು ಕಳೆದ ತಿಂಗಳು ಮುಗಿಸಿತ್ತು. ತನಿಖಾ ಸಂಸ್ಥೆಯ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಮತ್ತು ತನ್ನ ವಿರುದ್ಧ ಯಾವುದೇ ಶಿಕ್ಷಾರ್ಹ ಪುರಾವೆಗಳು ಇಲ್ಲ ಎಂದು ವಾದಿಸಿದ್ದರು. ತನ್ನ ವಿರುದ್ಧ ಹಾಜರುಪಡಿಸಲಾಗಿರುವ ಸಾಕ್ಷಿಗಳು ತೀವ್ರ ಸಂಶಯಾಸ್ಪದವಾಗಿವೆ ಎಂದು ಗುಜರಾತ್‌ನ ಮಾಜಿ ಎಟಿಎಸ್ ಮುಖ್ಯಸ್ಥರಾಗಿರುವ ವಂಝಾರ ತಿಳಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿವೃತ್ತಿ ಹೊಂದಿರುವ ಅಮೀನ್, ಇಶ್ರತ್ ಜಹಾನ್ ಎನ್‌ಕೌಂಟರ್ ಅಸಲಿಯಾಗಿದ್ದು, ಕೇಂದ್ರ ತನಿಖಾ ತಂಡವು ಹಾಜರುಪಡಿಸಿರುವ ಸಾಕ್ಷಿಗಳು ನಂಬಲರ್ಹವಲ್ಲ ಎಂಬ ನೆಲೆಯಲ್ಲಿ ತಮ್ಮ ಖುಲಾಸೆಗಾಗಿ ಮನವಿ ಸಲ್ಲಿಸಿದ್ದರು.





