ರಾಜ್ಯ ಪ್ರಶಸ್ತಿ ಸಂಭಾವ್ಯರ ಪಟ್ಟಿಯಲ್ಲಿದ್ದ ಪ್ರಮುಖ ಆರೋಪಿ!
ಆಶ್ರಮದಲ್ಲಿ ಬಾಲಕಿಯರಿಗೆ ಲೈಂಗಿಕ ಶೋಷಣೆ ಪ್ರಕರಣ

ಪಾಟ್ನಾ,ಆ.4: ಮುಝಫ್ಫರಪುರ ಆಶ್ರಯಧಾಮದಲ್ಲಿ ಬಾಲಕಿಯರಿಗೆ ಲೈಂಗಿಕ ಶೋಷಣೆ ಕರ್ಮಕಾಂಡದ ಪ್ರಮುಖ ಆರೋಪಿಗಳಲ್ಲೋರ್ವಳಾಗಿರುವ ಮಧು ಕುಮಾರಿಯ ಹೆಸರು ‘ಜಿಲ್ಲಾ ಮಹಿಳಾ ಸಮ್ಮಾನ್’ ಪ್ರಶಸ್ತಿಗಾಗಿ ಜಿಲ್ಲಾಡಳಿತವು ಸರಕಾರಕ್ಕೆ ಶಿಫಾರಸು ಮಾಡಿದ್ದ ಮೂವರು ‘ಅತಿ ವಿಶಿಷ್ಟ’ಮಹಿಳೆಯರ ಪಟ್ಟಿಯಲ್ಲಿತ್ತು!.
ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿದ್ದ ಆಕೆ ಮುಖ್ಯ ಆರೋಪಿ ಬೃಜೇಶ್ ಠಾಕೂರ್‌ನ ಎನ್‌ಜಿಒದಲ್ಲಿ ಪ್ರಮುಖ ಅಧಿಕಾರಿಯಾಗಿದ್ದಳು. ಮೇ 31ರಂದು 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಾಗಿನಿಂದ ಮಧು ಕುಮಾರಿ ತಲೆಮರೆಸಿಕೊಂಡಿದ್ದಾಳೆ.
ಫೆ.22ರಂದು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಮುಝಫ್ಫರಪುರ ಜಿಲ್ಲಾಧಿಕಾರಿಗಳು,ಜಿಲ್ಲಾಮಟ್ಟದ ಸಮಿತಿಯ ನಿರ್ಧಾರದ ಹಿನ್ನೆಲೆಯಲ್ಲಿ ಜಿಲ್ಲಾ ಮಹಿಳಾ ಸಮ್ಮಾನ್‌ಗಾಗಿ ರಾಜಕುಮಾರಿ ದೇವಿ(ಕಿಸಾನ್ ಚಾಚಿ),ಮಧು ಕುಮಾರಿ ಮತ್ತು ಮಾಲತಿ ಸಿಂಗ್ ಈ ಮೂವರು ಹೆಸರುಗಳನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದರು.
ಸಾಮಾಜಿಕ ಸೇವೆಯಲ್ಲಿ ಅಸಾಧಾರಣ ಕೊಡುಗೆಗಾಗಿ ಪ್ರತಿ ಜಿಲ್ಲೆಯಿಂದ ಓರ್ವ ಮಹಿಳೆಗೆ ಜಿಲ್ಲಾ ಮಹಿಳಾ ಸಮ್ಮಾನ್ ಪುರಸ್ಕಾರವನ್ನು ನೀಡಲಾಗುತ್ತದೆ. ಈ ವರ್ಷದ ಪ್ರಶಸ್ತಿ ಅಂತಿಮವಾಗಿ ಕೃಷಿಕ್ಷೇತ್ರದಲ್ಲಿ ತನ್ನ ವಿನೂತನ ಪರಿಕಲ್ಪನೆಗಳಿಗಾಗಿ ಗ್ರಾಮೀಣ ಉದ್ಯಮಿ ರಾಜಕುಮಾರಿ ದೇವಿ ಅವರ ಪಾಲಾಗಿತ್ತು.
ಮುಝಫ್ಫರಪುರದ ಆಶ್ರಯಧಾಮದಲ್ಲಿದ್ದ 44 ಬಾಲಕಿಯರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ 29 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು. ಠಾಕೂರ್ ಮತ್ತು ಮಧು ಕುಮಾರಿ ಸೇರಿದಂತೆ 11 ಜನರ ವಿರುದ್ಧ ಮೇ 31ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಎಲ್ಲ 44 ಬಾಲಕಿಯರನ್ನು ಈಗ ಮಧುಬನಿ,ಪಾಟ್ನಾ ಮತ್ತು ಮೊಕಾಮಾಗಳಲ್ಲಿಯ ಅಲ್ಪಾವಧಿ ವಸತಿ ಗೃಹಗಳಲ್ಲಿರಿಸಲಾಗಿದೆ.
ಮೊದಲು ವೇಶ್ಯಾದಂಧೆಯನ್ನು ನಡೆಸುತ್ತಿದ್ದ ಮಧು ಕುಮಾರಿ ಠಾಕೂರ್ ಅಧೀನದಲ್ಲಿ ಪ್ರಮುಖ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಸಮಾಜದಲ್ಲಿ ಸಭ್ಯವ್ಯಕ್ತಿಯೆಂದು ಬಿಂಬಿಸಿಕೊಳ್ಳಲು ಆಕೆ ಠಾಕೂರ್‌ಗೆ ಸೇರಿದ ಎನ್‌ಜಿಒದಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಳು. ಕೆಂಪು ಪ್ರದೇಶವಾಗಿರುವ ಚತುರ್ಭುಜ ಸ್ಥಾನದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಠಾಕೂರ್ ಮಧು ಕುಮಾರಿಯನ್ನು ಬಳಸಿಕೊಂಡಿದ್ದು ಸ್ಪಷ್ಟವಾಗಿದೆ. ಆಕೆಯನ್ನು ಠಾಕೂರ್‌ಗೆ ಸೇರಿದ ಇನ್ನೊಂದು ಸ್ವಯಂಸೇವಾ ಸಂಸ್ಥೆ ವಾಮ ಶಕ್ತಿ ವಾಹಿನಿಯಲ್ಲಿ ಅಧಿಕೃತ ಉದ್ಯೋಗಿಯನ್ನಾಗಿ ನೇಮಿಸಲಾಗಿತ್ತು ಮತ್ತು ಬೆಟಿಯಾ ಹಾಗೂ ಮುಝಫ್ಫರಪುರಗಳಲ್ಲಿ ಏಡ್ಸ್ ಜಾಗ್ರತಿ ಯೋಜನೆಗಳನ್ನು ಆಕೆಗೆ ಒಪ್ಪಿಸಲಾಗಿತ್ತು ಎಂದು ಡಿವೈಎಸ್‌ಪಿ ಮುಕುಲ ಕುಮಾರ ರಂಜನ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.







