ಬೆಂಗಳೂರು: ಅಮೀನ್ ಕೊಲೆ ಪ್ರಕರಣ; ಐವರ ಬಂಧನ

ಬೆಂಗಳೂರು, ಆ.4: ಹಳೆ ದ್ವೇಷದ ಹಿನ್ನೆಲೆಯಲ್ಲಿ ಸೆಯ್ಯದ್ ಅಮೀನ್ ಎಂಬಾತನನ್ನು ಕೊಲೆಗೈದ ಪ್ರಕರಣ ಸಂಬಂಧ ಐವರನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಲ್ಮೀಕಿ ನಗರದ ಮುದಾಸೀರ್(24), ಸುಲ್ತಾನ್ ಪಾಷಾ(24), ಮಝರ್‌ಖಾನ್(27), ನಯೀಮ್ ಪಾಷಾ(23) ಹಾಗೂ ರಿಯಾಝ್(20) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸೆಯ್ಯದ್ ಅಮೀನ್ 2017ರ ರಂಝಾನ್ ಹಬ್ಬದ ವೇಳೆ ಚಂದ್ರಾಲೇಔಟ್‌ನ ಗಂಗೊಂಡನಹಳ್ಳಿ ಹಾರೋನ್ ಎಂಬುವನಿಗೆ ಚಾಕುನಿಂದ ಹಲ್ಲೆ ನಡೆಸಿದ್ದ. ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಒಳಸಂಚು ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಇದೇ ಪ್ರಕರಣದಲ್ಲಿ ಮೂರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣವರ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಜು.31ರ ರಾತ್ರಿ ಬಂಬೂ ಬಜಾರ್ ರಸ್ತೆ ವ್ಯಾಪ್ತಿಯಲ್ಲಿ ಯುವಕರ ಗುಂಪೊಂದು ಒಳಸಂಚು ನಡೆಸಿ ಮಾರಕಾಸ್ತ್ರಗಳಿಂದ ಹಳೆ ದ್ವೇಷದ ಹಿನ್ನೆಲೆಯಲ್ಲಿ ವಾಲ್ಮೀಕಿನಗರದ ನಿವಾಸಿ ಸೆಯ್ಯದ್ ಅಮೀನ್ (22) ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.







