ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಐಜಿಪಿ ಅಲೋಕ್ ಕುಮಾರ್ ಕರೆ

ಧಾರವಾಡ, ಆ.4: ಪೊಲೀಸ್ ಇಲಾಖೆ ಸಮಾಜದ ಶಾಂತಿ, ಸುವ್ಯವಸ್ಥೆ, ಸಾಮರಸ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದು, ಇಲಾಖೆಗೆ ಬರುವ ಪ್ರತಿಯೊಬ್ಬ ಪೊಲೀಸರು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಕೀರ್ತಿ ತರಬೇಕೆಂದು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ಅಲೋಕ್ ಕುಮಾರ್ ಕರೆ ನೀಡಿದ್ದಾರೆ.
ಶನಿವಾರ ನಗರದ ಡಿ.ಎ.ಆರ್.ಪರೇಡ್ ಮೈದಾನದಲ್ಲಿ ಪೊಲೀಸ್ ತರಬೇತಿ ಶಾಲೆ ಆಯೋಜಿಸಿದ 20ನೆ ತಂಡದ ತಾತ್ಕಾಲಿಕ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಸೇವೆಗೆ ಸೇರುವ ಪ್ರತಿಯೊಬ್ಬರು ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಸಮಯದಲ್ಲಿ ಎಂತಹ ಪರಿಸ್ಥಿತಿ ಬಂದರೂ ಎದುರಿಸುವ ಎದೆಗಾರಿಕೆ ಇರಬೇಕು. ಯಶಸ್ವಿ ಪೊಲೀಸ್ ಅಧಿಕಾರಿ ಆಗಬೇಕಾದರೆ ವೃತ್ತಿಯಲ್ಲಿ ಶಿಸ್ತು, ಸಂಯಮ, ಸಜ್ಜನಿಕೆ ಇರಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರೊಂದಿಗೆ ಒರಟಾಗಿ ವರ್ತಿಸದೆ ಸಂಯಮದಿಂದ ಇದ್ದು, ಜನಸ್ನೇಹಿ ಆಗಬೇಕು. ಯಾವುದೇ ರೀತಿಯ ಭಯ, ದಾಕ್ಷಿಣ್ಯ, ದ್ವೇಷ, ಪೂರ್ವಗ್ರಹಗಳಿಗೆ ಒಳಗಾಗದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಯಾವುದೇ ಆರೋಪ, ದೂರುಗಳಿಂದ ಇಲಾಖೆಗೆ ಆಗಲಿ ಅಥವಾ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.
ಪೊಲೀಸ್ ವೃತ್ತಿಯಲ್ಲಿ ಯಶಸ್ಸು ಸಾಧಿಸಿ, ಸಂತೃಪ್ತಿ ಕಾಣಬೇಕೆಂದರೆ ಪ್ರತಿಯೊಬ್ಬರು ತಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಕುಟುಂಬದ ಕಡೆಗೆ ಗಮನ ಹರಿಸಬೇಕು. ಮತ್ತು ಇಲಾಖೆ ಹಾಗೂ ಕರ್ತವ್ಯದ ಬಗ್ಗೆ ಗೌರವ, ನಿಷ್ಠೆಗಳನ್ನು ಅಳವಡಿಸಿಕೊಂಡಿರಬೇಕೆಂದು ಅಲೋಕ್‌ಕುಮಾರ್ ತಿಳಿಸಿದರು.
ಒಳಾಂಗಣ ಸ್ಪರ್ಧೆ, ಹೊರಾಂಗಣ ಕ್ರೀಡೆ, ಫೈರಿಂಗ್ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪ್ರಶಿಕ್ಷಣಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಮೈಸೂರು ಜಿಲ್ಲೆಯ ಸಹಾಯಕ ಪೊಲೀಸ್ ಪೇದೆ ಪ್ರಸನ್ನಕುಮಾರ್ ಎಂಬವರಿಗೆ ‘ಬೆಸ್ಟ್ ಟ್ರೇನಿ’ ವಿಶೇಷ ಬಹುಮಾನವನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ದೀಪಾ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಸಂಗೀತಾ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.







