ಪ್ಯಾಟ್ಸನ್ ರೋಡ್ರಿಗ್ಸ್ ಹತ್ಯೆ: ಸಚಿವ ದೇಶಪಾಂಡೆ ಆಘಾತ

ಬೆಂಗಳೂರು, ಆ.4: ಅಪಘಾನಿಸ್ತಾನದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಕಾಗವಾಡದ ಪ್ಯಾಟ್ಸನ್ ರೋಡ್ರಿಗ್ಸ್ ಅವರ ಹತ್ಯೆ ಮಾಡಿರುವ ಘಟನೆಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಆಘಾತ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಅರಸಿಕೊಂಡು ಹೋಗಿದ್ದ ಅಮಾಯಕ ವ್ಯಕ್ತಿಗಳನ್ನು ಬರ್ಬರವಾಗಿ ಕಗ್ಗೊಲೆಗೈದಿರುವ ಘಟನೆಯು ಹೇಡಿಗಳ ಕೃತ್ಯವಾಗಿದೆ. ಮನುಕುಲಕ್ಕೇ ಕಳಂಕ ತರುವಂತಹ ಇಂತಹ ಘಟನೆಗಳು ತೀವ್ರ ಖಂಡನಾರ್ಹ. ಪ್ಯಾಟ್ಸನ್ ಅವರ ಈ ದುರಂತ ಅಂತ್ಯಕ್ಕೆ ಕಾರಣರಾದವರನ್ನು ಅಫಘಾನಿಸ್ತಾನ ಸರಕಾರವು ಕೂಡಲೇ ಪತ್ತೆ ಹಚ್ಚಿ, ಶಿಕ್ಷಿಸಬೇಕು. ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಇಂತಹ ಘಟನೆಗಳು ಮರುಕಳಿಸದಂತೆ ಆ ದೇಶದ ಸರಕಾರದೊಂದಿಗೆ ಮಾತುಕತೆ ನಡೆಸಿ, ಆಗ್ರಹಿಸಬೇಕು ಎಂದು ದೇಶಪಾಂಡೆ ತಿಳಿಸಿದ್ದಾರೆ.
ಪ್ಯಾಟ್ಸನ್ ಅವರ ಈ ಸಾವಿನಿಂದ ಉಂಟಾಗಿರುವ ದುಃಖವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕುಟುಂಬ ವರ್ಗದವರಿಗೆ ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.





