ಪಚ್ಚನಾಡಿಯಲ್ಲಿ ಮಗನನ್ನು ಇರಿದು ಕೊಂದ ಪ್ರಕರಣ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

ಮಂಗಳೂರು, ಆ.4: ತಂದೆಯೇ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ತಂದೆಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ವಿಧಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ನಗರದ ಹೊರ ವಲಯದ ಪಚ್ಚನಾಡಿಯ ಬಸವಲಿಂಗಪ್ಪ ನಗರ ನಿವಾಸಿ ರಾಜೇಶ್ ಯಾನೆ ಬಸವರಾಜು ಯಾನೆ ರಾಜು (49) ಶಿಕ್ಷೆಗೊಳಗಾದ ಅಪರಾಧಿ. ಐಪಿಸಿ ಸೆಕ್ಷನ್ 504 ಅವಾಚ್ಯವಾಗಿ ಬೈದಿರುವುದಕ್ಕೆ 6 ತಿಂಗಳು, ಐಪಿಸಿ ಸೆಕ್ಷನ್ 326 ತೀವ್ರ ಸ್ವರೂಪದ ಗಾಯ ಮಾಡಿರುವುದಕ್ಕೆ 326, ಐಪಿಸಿ ಸೆಕ್ಷನ್ 506 ಕೊಲೆ ಬೆದರಿಕೆ 1 ವರ್ಷ ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 302 ಕೊಲೆ ಪ್ರಕರಣ ಖುಲಾಸೆಗೊಂಡಿದೆ.
ಪ್ರಕರಣದ ಹಿನ್ನೆಲೆ: ಪಚ್ಚನಾಡಿಯ ಬಸವಲಿಂಗಪ್ಪ ನಗರ ನಿವಾಸಿ ರಾಜೇಶ್ ಯಾನೆ ಬಸವರಾಜು ತನ್ನ ಪುತ್ರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿದ್ದ ಯಶವಂತ (20) ಎಂಬಾತನನ್ನು 2016 ನ. 9ರಂದು ಅಡುಗೆ ಮನೆಯಲ್ಲಿದ್ದ ಚೂರಿಯಿಂದ ಇರಿದಿದ್ದ. ಎದೆಗೆ ಹಾಗೂ ಬೆನ್ನಿನ ಭಾಗಕ್ಕೆ ಗಾಯಗೊಂಡು ಬಿದ್ದಿದ್ದ ಯಶವಂತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದು 11 ದಿನಗಳ ನಂತರ ನ. 21ರಂದು ಯಶವಂತ ಮೃತಪಟ್ಟಿದ್ದ.
ಅಪ್ಪ ಹಾಗೂ ಮಗನಿಗೆ ಆಗಾಗ ಗಲಾಟೆಯಾಗುತ್ತಿತ್ತು. ಒಂದು ಬಾರಿ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಮೃತರ ಸಹೋದರಿಯರು ಹಾಗೂ ನೆರೆಯವರು ಹೇಳಿದ ಸಾಕ್ಷಿಯಿಂದ ಅಪರಾಧಿಗೆ ಶಿಕ್ಷೆಯಾಗುವಂತಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಚೂರಿ ಇರಿತ ಮಾಡಿದಲ್ಲ ಎನ್ನುವುದು ಸಾಬೀತಾದ ಕಾರಣ ಕೊಲೆ ಸೆಕ್ಷನ್ ಖುಲಾಸೆಗೊಂಡಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಮುಹಮ್ಮದ್ ಶರೀಫ್ ರಾವುತರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಸರಕಾರದ ಪರವಾಗಿ ವಾದಿಸಿದ್ದರು.







