ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಐವರ ಬಂಧನ
ಬೆಂಗಳೂರು, ಆ.4: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಗೆ ಚಾಕು ತೋರಿಸಿ, ಬೆದರಿಸಿ ನಗದು, ಚಿನ್ನಾಭರಣಗಳನ್ನು ದೋಚಿದ್ದ ಆರೋಪದಡಿ ಐವರನ್ನು ಭಾರತಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಶಾಂತಿನಿ ಚೌಕ್ ರಸ್ತೆಯ ಫಾರೂಕ್ (24), ಲಿಂಗರಾಜಪುರಂನ ನದೀಮ್ ಖಾನ್ (22), ಭಾರತಿನಗರದ ರತನ್ (20) ಹಾಗೂ ಸುಲ್ತಾನ್‌ನಗರದ ಝಾವಾದ್ ಅಲಿ (21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ 2 ಚಿನ್ನದ ಸರ, 14 ವಿವಿಧ ಕಂಪೆನಿ ಕೈಗಡಿಯಾರಗಳು, ಒಂದೂವರೆ ಸಾವಿರ ನಗದು ಸೇರಿ 4 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಜೂ.25 ರಂದು ಸಂಜೆ 5ರ ವೇಳೆ ಎಚ್‌ಬಿಆರ್‌ಲೇಔಟ್‌ನ 5ನೆ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಜೋನಾಥನ್ ಥಾಮಸ್ ಅವರನ್ನು ಕುಡಿಯಲು ನೀರು ಕೇಳಿದ್ದಾರೆ. ಥಾಮಸ್ ಅವರು ನೀರು ತರಲು ಒಳ ಹೋದ ಕೂಡಲೇ ಮನೆಯೊಳಗೆ ನುಗ್ಗಿ ಚಾಕು ತೋರಿಸಿ ಥಾಮಸ್ ದಂಪತಿಯನ್ನು ಬೆದರಿಸಿ ಚಿನ್ನಾಭರಣಗಳು, ಕೈಗಡಿಯಾರಗಳನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.





