ಆ.14 ರ ನಂತರ ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ಜಾರಿಗೆ ಕ್ರಮ: ಸಚಿವ ಎನ್.ಮಹೇಶ್ ಸ್ಪಷ್ಟನೆ

ಮೈಸೂರು,ಆ.4: ಎಸ್ಸಿ ಎಸ್ಟಿ ಬಡ್ತಿ ನೌಕರರ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆ.14 ರ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಸ್ಪಷ್ಟಪಡಿಸಿದರು.
ನಗರದ ಸುತ್ತೂರು ಮಠದ ಆವರಣದಲ್ಲಿ ಶನಿವಾರ ಬಸವ ಬಳಗಗಳ ಒಕ್ಕೂಟ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಹಿಂದಿನ ಸರಕಾರದ ಅವಧಿಯಲ್ಲೆ ಅಂಕಿತ ಹಾಕಿರುವ ಬಿಲ್ ಸರಕಾರದ ಮುಂದಿದೆ. ಅದನ್ನು ಜಾರಿಗೊಳಿಸಲು ಸರಕಾರ ಬದ್ಧವಿದೆ. ಆದರೆ ಪವಿತ್ರ ಪ್ರಕರಣ ಸುಪ್ರೀಂ ಕೋರ್ಟ್ ಮುಂದಿರುವುದರಿಂದ ನ್ಯಾಯಾಂಗ ಉಲ್ಲಂಘನೆಯಾಗುತ್ತದೆ ಎಂದು ಜಾರಿಮಾಡಲು ಹಿಂದೇಟು ಹಾಕಲಾಗಿತ್ತು. ಈ ಕುರಿತು ದಲಿತ ಮುಖಂಡರ ಸಭೆ ನಡೆಸಿ ಎಲ್ಲವನ್ನೂ ವಿವರಿಸಲಾಗಿದೆ ಎಂದು ಹೇಳಿದರು.
ಅಹಿಂಸ ಸಂಘಟನೆ ಕೂಡ ರಾಷ್ಟ್ರಪತಿಗಳ ಅಂಕಿತಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು, ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ ಯಥಾ ಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆ.14 ರಂದು ಕೋರ್ಟ್‍ನಲ್ಲಿ ವಿಚಾರಣೆ ಇರುವುದರಿಂದ ಅದನ್ನು ನೋಡಿಕೊಂಡು, ರಾಷ್ಟ್ರಪತಿಗಳ ಅಂಕಿತ ಜಾರಿಗೊಳಿಸಲು ಅನುಮತಿ ಕೋರಲಾಗುವುದು ಎಂದು ಸ್ಪಷ್ಟಪಡಿಸಿದರು.
ಆನ್ ಲೈನ್ ಮೂಲಕ ಶಿಕ್ಷಕರ ವರ್ಗಾವಣೆ: ಇನ್ನು ಮುಂದೆ ಆನ್ ಲೈನ್ ಮೂಲಕ ಶಿಕ್ಷಕರ ವರ್ಗಾವಣೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮೂರು ಪ್ರತ್ಯೇಕ ಎ,ಬಿ,ಸಿ ಝೋನ್‍ಗಳನ್ನು ಮಾಡಲಾಗಿದ್ದು, ಇದರ ಆಧಾರದ ಮೇಲೆಯೇ ವರ್ಗಾವಣೆಯ ನಡೆಯತ್ತದೆ. ಒಂದೇ ಕಡೆ ಯಾರು ಹತ್ತು ವರ್ಷ ಕೆಲಸ ಮಾಡಿರುತ್ತಾರೊ ಅಂತಹವರಿಗೆ ಮೊದಲ ಆದ್ಯತೆ ನೀಡಲಾಗುವುದು. ಶಿಕ್ಷಕರ ವರ್ಗಾವಣೆಯಲಿ ಇಲಾಖೆಯ ಹಸ್ತಕ್ಷೇಪ ಇರುವುದಿಲ್ಲ ಎಂದು ಹೇಳಿದರು.







