ದಾವಣಗೆರೆ: ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಧರಣಿ

ದಾವಣಗೆರೆ,ಆ.04: ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಕಾಂ.ಹೆಚ್.ಕೆ.ರಾಮಚಂದ್ರಪ್ಪ, ಕಳೆದ 16 ವರ್ಷಗಳಿಂದ ಅಕ್ಷರದಾಸೋಹ ಬಿಸಿಯೂಟ ಯೋಜನೆಯಲ್ಲಿ ಮುಖ್ಯ ಅಡುಗೆಯವರಾಗಿ ಮತ್ತು ಸಹಾಯಕರಾಗಿ 1 ಲಕ್ಷ 18 ಸಾವಿರ ಜನ ಮಹಿಳೆಯರು ದುಡಿಯುತ್ತಿದ್ದಾರೆ. ಆದರೆ, ಅವರಿಗೆ ಈವರೆಗೆ ಯಾವುದೇ ಭದ್ರತೆ ಇಲ್ಲ. ಕೆಲಸ ಖಾಯಂಗೊಳಿಸದೆ ಗೌರವ ಸಂಭಾವನೆ ಹೆಸರಿನಲ್ಲಿ ಸರ್ಕಾರ ಶೋಷಣೆ ಮಾಡುತ್ತಿದೆ. ಕೂಡಲೇ ಬಿಸಿಯೂಟ ತಯಾರಕರಿಗೆ ಕನಿಷ್ಟ 10,500 ರೂ. ವೇತನ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಇಲ್ಲಿನ ಅಡುಗೆಯವರಿಗೆ ಹಾಗೂ ಸಹಾಯಕರಿಗೆ ತಮಿಳುನಾಡಿನ ಮಾದರಿಯಲ್ಲಿ ಎಲ್ಲಾ ಸೌಲಭ್ಯಗಳು ಒದಗಿಸಬೇಕು. ಅಲ್ಲದೆ, ಇತರೆ ನೌಕರರಿಗೆ ನೀಡುವಂತೆ ಪಿಎಫ್, ಇಎಸ್‍ಐ ಜಾರಿ ಮಾಡಬೇಕು. ಮಾಸಿಕ ಮೂರು ಸಾವಿರ ನಿವೃತ್ತಿ ಪಿಂಚಣಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಗುತ್ತಿಗೆ ರದ್ದುಗೊಳಿಸಿ ಸರ್ಕಾರದ ಕೈಪಿಡಿಯಲ್ಲಿರುವಂತೆ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿ ಬಡಿಸಬೇಕು. ದಸರಾ ಹಾಗೂ ಬೇಸಿಗೆಯ ರಜೆಯ ವೇತನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೆ, ಅಡುಗೆಯವರಿಗೆ ಹಾಗೂ ಸಹಾಯಕರಿಗೆ ರಜೆಯನ್ನು 20 ದಿನಗಳಿಗೆ ವಿಸ್ತರಿಸಬೇಕು. ಬಿಸಿಯೂಟ ತಯಾರಕರಿಗೆ 5 ಲಕ್ಷ ರೂ. ವಿಮಾಯೋಜನೆಯನ್ನು ಶಿಕ್ಷಣ ಇಲಾಖೆಯಿಂದ ಅನುಷ್ಟಾನಗೊಳಿಸಬೇಕು. ಶೀಘ್ರವೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಆವರೆಗೆರೆ ಚಂದ್ರು, ಐರಣಿಚಂದ್ರು, ಆವರಗೆರೆ ವಾಸು, ರುದ್ರಮ್ಮ ಬೆಳಲಗೆರೆ, ಜ್ಯೋತಿ ಲಕ್ಷ್ಮಿ, ಜಯಮ್ಮ, ಲಲಿತಮ್ಮ, ಪುರವಂತರ, ಮಹಮದ್ ಬಾಷಾ, ಗುಡಿಹಳ್ಳಿ ಹಾಲೇಶ್ ಸೇರಿದಂತೆ ಅನೇಕ ಬಿಸಿಯೂಟ ತಯಾರಿಕೆಯವರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.







