ವ್ಯಕ್ತಿ ಸಮಾಜಕ್ಕೆ ಮಾಡಿದ ಸೇವೆಯ ಆಧಾರದ ಮೇಲೆ ಪ್ರಶಸ್ತಿ ಸಿಗಬೇಕು: ಮಾಜಿ ಸಚಿವೆ ಡಾ. ಲೀಲಾದೇವಿ

ದಾವಣಗೆರೆ,ಆ.04: ವ್ಯಕ್ತಿ ಸಮಾಜಕ್ಕೆ ಮಾಡಿದ ಸೇವೆ ಆಧಾರದ ಮೇಲೆ ಪ್ರಶಸ್ತಿ ಸಿಗಬೇಕು ಎಂದು ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ್ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇಂದು ಪ್ರಶಸ್ತಿಯನ್ನು ಹಣ ಕೊಟ್ಟು ಖರೀದಿಸುವಂತ ಸ್ಥಿತಿಗೆ ಬಂದುನಿಂತಿದೆ. ಆದರೆ, ಪ್ರಶಸ್ತಿ ನೀಡಬೇಕಾದ್ದು ವ್ಯಕ್ತಿಗಲ್ಲ. ಅವರ ಮಾಡಿದ ಸೇವೆಯ ಮೇಲೆ. ಈವರೆಗೆ ನೀಡಿದ ಪ್ರಶಸ್ತಿಯ ಯಾವ ಹಣವನ್ನು ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ. ಅದರಂತೆ, ಇಂದಿನ ಪ್ರಶಸ್ತಿ ಮೊತ್ತವನ್ನು ಸಹ ನಾನು ಅಕ್ಕಮಹಾದೇವಿ ಪ್ರತಿಷ್ಠಾನಕ್ಕೆ ನೀಡುತ್ತಿದ್ದೇನೆ ಎಂದು, ಸ್ಥಳದಲ್ಲಿಯೇ ಶ್ರೀಗಳ ಮೂಲಕ 25 ಸಾವಿರ ರೂ. ಮೊತ್ತದ ಪ್ರಶಸ್ತಿ ಚೆಕ್ ಅನ್ನು ಅಕ್ಕಮಹಾದೇವಿ ಪ್ರತಿಷ್ಠಾನ ಸಿಬ್ಬಂದಿಗೆ ವಿತರಿಸಿದರು.
ಯಾರೂ ಮತ್ತೊಬ್ಬ ಬಸವಣ್ಣ, ಮತ್ತೊಬ್ಬ ಅಕ್ಕಮಹಾದೇವಿ, ಮಾಗನೂರು ಬಸಪ್ಪರಾಗಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಆದ್ದರಿಂದ ನಾನು ನಿಮ್ಮ ಮನೆಮಗಳಷ್ಟೇ. ನನ್ನನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ ಎಂದು ಮನವಿ ಮಾಡಿದ ಅವರು, ನನಗೆ ವಯಸ್ಸು 85. ಆದರೆ, ಇಂದಿಗೂ ನಿತ್ಯ 18 ತಾಸು ಕೆಲಸ ಮಾಡುತ್ತೇನೆ. ನಾನೇ ನನ್ನ ಬಟ್ಟೆ ತೊಳೆಯುತ್ತೇನೆ, ಅಡುಗೆ ಮಾಡಿಕೊಳ್ಳುತ್ತೇನೆ. ಮನೆ ಸ್ವಚ್ಛಗೊಳಿಸುತ್ತೇನೆ. ನಾನು ಯಾರನ್ನೂ ಆಶ್ರಯಿಸಿಲ್ಲ ಎಂದು ವಿವರಿಸಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಅಭಿನಂದನಾ ನುಡಿಗಳನ್ನಾಡಿ, ಲೀಲಾದೇವಿ ಅವರು ರಾಜ್ಯದ ಮಹಿಳಾ ಸಚಿವರಲ್ಲಿ ಅತ್ಯಂತ ಪ್ರಮುಖರಾದವರು. ಕುಟುಂಬ, ರಾಜಕೀಯ, ಸಮಾಜಕ್ಕೆ ಅವರ ಕಾಣಿಕೆ ಅಪಾರ. ವರ್ಷ 85 ಆಗಿದ್ದರೂ ಅವರ ಕಾರ್ಯಚಟುವಟಿಕೆಗೆ ಇನ್ನೂ 18ರ ಪ್ರಾಯ. ತಮ್ಮ 23ನೇ ವಯಸ್ಸಿನಿಂದ ಇಂದಿಗೂ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡರು ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ಕಸಪಾ ಜಿಲ್ಲಾಧ್ಯಕ್ಷ ಮಾಯಣ್ಣ, ಹಾಸನ ಕಸಪಾ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕೊಡಗು ಕಸಪಾ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮೈಸೂರು ಕಸಪಾ ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ, ಮಂಡ್ಯ ಕಸಪಾ ಜಿಲ್ಲಾಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕತ್ತಿಮಲ್ಲೆನಹಳ್ಳಿ ಪರಮೇಶ್ವರ್, ಕಲ್ಲಳ್ಳಿ ಹರೀಶ್ ಸುನಂದಾದೇವಿ ಮತ್ತಿತರರಿದ್ದರು. ದಿಳ್ಯಪ್ಪ ಸ್ವಾಗತಿಸಿದರು. ಮಾಗನೂರು ಬಸಪ್ಪ ಶಾಲೆ ಮಕ್ಕಳು ಪ್ರಾರ್ಥಿಸಿದರು.







