ಸೇನೆ, ಕಲ್ಲೆಸೆತಗಾರರ ಮಧ್ಯೆ ಸಂಘರ್ಷ: ಓರ್ವ ನಾಗರಿಕ ಸೇನಾ ಗುಂಡಿಗೆ ಬಲಿ

ಶ್ರೀನಗರ, ಆ.4: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನೆ ಮತ್ತು ಕಲ್ಲೆಸೆತಗಾರರ ಮಧ್ಯೆ ನಡೆದ ಸಂಘರ್ಷದ ವೇಳೆ ಸೇನೆ ಹಾರಿಸಿದ ಗುಂಡಿಗೆ ನಾಗರಿಕನೊಬ್ಬ ಬಲಿಯಾದ ಘಟನೆ ಶನಿವಾರ ನಡೆದಿದೆ.
ಶುಕ್ರವಾರ ರಾತ್ರಿ ಸೇನಾಪಡೆ ಕಿಲೂರಾ ಗ್ರಾಮದಲ್ಲಿ ಐದು ಮಂದಿ ಉಗ್ರರನ್ನು ಹತ್ಯೆ ಮಾಡಿತ್ತು. ಶನಿವಾರ ಸ್ಥಳೀಯ ಉಗ್ರನೋರ್ವನ ಅಂತ್ಯಕ್ರಿಯೆ ನಡೆಸಿದ ನಂತರ ನೂರಾರು ಪ್ರತಿಭಟನಾಕಾರರು ಹತ್ಯೆ ನಡೆದ ಸ್ಥಳಕ್ಕೆ ಆಗಮಿಸಿ ಸೇನಾಪಡೆಯ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಸೇನೆಯು ಪ್ರತಿಭಟನಾಕಾರರನ್ನು ಚದುರಿಸಲು ಪೆಲೆಟ್ಸ್ ಮತ್ತು ಗುಂಡುಗಳನ್ನು ಹಾರಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ಬಿಲಾಲ್ ಅಹ್ಮದ್ ಖಾನ್ ಸೇನಾ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ದೃಡಪಟ್ಟ ನಂತರ ಅಧಿಕೃತ ಹೇಳಿಕೆ ನೀಡುವುದಾಗಿ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
Next Story





