ಬೆಳೆ ತ್ಯಾಜ್ಯ ಸುಡದ ರೈತರಿಗೆ ಪುರಸ್ಕಾರ: ಹರ್ಯಾಣ ಸರಕಾರದ ಘೋಷಣೆ

ಚಂಡೀಗಢ, ಆ.4: ಭತ್ತದ ಸುಗ್ಗಿಯ ಸಂದರ್ಭ ಬೆಳೆಯ ತ್ಯಾಜ್ಯವನ್ನು ರೈತರು ಸುಡುವ ಕಾರಣ ಹೊಗೆಯಿಂದಾಗಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆ ತ್ಯಾಜ್ಯವನ್ನು ಸುಟ್ಟುಹಾಕದ ರೈತರನ್ನು ಪುರಸ್ಕರಿಸುವುದಾಗಿ ಹರ್ಯಾಣ ಸರಕಾರ ತಿಳಿಸಿದೆ.
ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಅಭಿಯಾನವೊಂದನ್ನು ಆರಂಭಿಸಲಾಗುವುದು ಎಂದು ಹರ್ಯಾಣದ ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಲಾಕ್ಷ ಲಿಖಿ ತಿಳಿಸಿದ್ದಾರೆ. ಕ್ಷೇತ್ರ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ತ್ಯಾಜ್ಯದ ಸೂಕ್ತ ನಿರ್ವಹಣೆಗಾಗಿ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಿ.ಕೆ.ಬೆಹೆರಾ, ಮಾಹಿತಿ, ಸಾರ್ವಜನಿಕ ಸಂಪರ್ಕ ಹಾಗೂ ಭಾಷೆಗಳ ಇಲಾಖೆಯ ಪ್ರಧಾನ ನಿರ್ದೇಶಕ ಸಮೀರ್ ಪಾಲ್ ಉಪಸ್ಥಿತರಿದ್ದರು.
ಬೆಳೆತ್ಯಾಜ್ಯ ಸುಡದ ರೈತರನ್ನು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಸನ್ಮಾನಿಸುತ್ತಾರೆ. ಅಲ್ಲದೆ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲೂ ಇಂತಹ ರೈತರನ್ನು ವಿಶೇಷವಾಗಿ ಸನ್ಮಾನಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಬೆಳೆತ್ಯಾಜ್ಯದ ಸೂಕ್ತ ನಿರ್ವಹಣೆ ಬಗ್ಗೆ ಪ್ರತೀ ಹಳ್ಳಿಯಲ್ಲೂ ಜಾಗೃತಿ ಮೂಡಿಸುವಂತೆ ಅವರು ಸೂಚಿಸಿದರು. ಕೃಷಿ ಯಂತ್ರೋಪಕರಣ ಖರೀದಿಗೆ ಶೇ.80 ಸಬ್ಸಿಡಿ ನೀಡಲಾಗುತ್ತದೆ. ವೈಯಕ್ತಿಕವಾಗಿ ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಶೇ.50 ಸಬ್ಸಿಡಿ ದೊರೆಯುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರಕಾರ 137 ಕೋಟಿ ರೂ. ಒದಗಿಸಿದೆ ಎಂದು ಅಭಿಲಾಕ್ಷ ಲಿಖಿ ತಿಳಿಸಿದರು.







