ಕಳಸ: ಹತ್ತು ದಿನ ಕಳೆದರೂ ಪತ್ತೆಯಾಗದ ಮಂಗಳೂರಿನ ಯುವಕ
ಅಂಬಾತೀರ್ಥದಲ್ಲಿ ನೀರುಪಾಲಾಗಿದ್ದ ಕಿರಣ್ ಕೋಟ್ಯಾನ್

ಕಳಸ, ಆ.4: ಇಲ್ಲಿಯ ಭದ್ರಾ ನದಿಯ ಅಂಬಾತೀರ್ಥ ಎಂಬಲ್ಲಿ ಮಂಗಳೂರಿನ ಕಿರಣ್ ಕೋಟ್ಯಾನ್ ನೀರಿನಲ್ಲಿ ಕೊಚ್ಚಿ ಹೋಗಿ 10 ದಿನ ಕಳೆದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಶನಿವಾರವೂ ಎನ್‍ಡಿಆರ್‍ಎಫ್ ತಂಡ ಭದ್ರಾ ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿದೆ.
ಜುಲೈ 26ರಂದು ಮಂಗಳೂರಿನ ತುಂಬೆ ಎಂಬಲ್ಲಿಯ ಕಿರಣ್ ಕಳಸ ಭಾಗಕ್ಕೆ ತನ್ನ 13 ಸ್ನೇಹಿತರ ಜತೆಗೂಡಿ ಪ್ರವಾಸಕ್ಕೆ ಬಂದಿದ್ದರು. ಇಲ್ಲಿಯ ಭದ್ರಾ ನದಿಯ ಅಂಬಾತೀರ್ಥದ ವೀಕ್ಷಣೆಗೆ ತೆರಳಿದ್ದ ಇವರು ಬಂಡೆಯೊಂದರ ಮೇಲಿಂದ ಚಾರಿ ಬಿದ್ದು ನೀರಿನಲ್ಲಿ ಕೊಚ್ಚಿದ್ದರು. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಘಟನೆ ನಡೆದ ಬಳಿಕ ಸ್ಥಳಿಯರು, ಅಗ್ನಿಶ್ಯಾಮಕ ದಳ,ಬಂಟ್ವಾಳದ ಮುಳುಗು ತಜ್ಞರು ಭದ್ರಾ ನದಿಯ ಸುಮಾರು 20 ಕಿ.ಮೀಗಳ ದೂರ ಹುಡುಕಾಟ ನಡೆಸಿದ್ದಾರೆ. ಈ ಘಟನೆ ನಡೆದು 10 ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಎನ್‍ಡಿಆರ್‍ಎಫ್‍ನ 30 ಜನರ ತಂಡ ಭದ್ರಾ ನದಿಯ ಅಂಬಾತೀರ್ಥದಲ್ಲಿ ಹುಡುಕಾಡುತ್ತಿದ್ದಾರೆ. ಮದ್ಯಾಹ್ನ ಕಳಸಕ್ಕೆ ಆಗಮಿಸಿದ ತಂಡ ಸಂಜೆ 4 ಗಂಟೆಯಿಂದ ಕಾರ್ಯಚರಣೆಗೆ ಇಳಿದಿದ್ದಾರೆ. ಆದರೆ ಸಂಜೆಯ ವರೆಗೂ ನೀರಿನಲ್ಲಿ ಕೊಚ್ಚಿಹೋದ ಯುವಕನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಸ್ಥಳದಲ್ಲಿ ಅಗ್ನಿಶ್ಯಾಮಕ ದಳ, ಕಳಸ ಪೊಲೀಸರು, ತಹಶೀಲ್ದಾರ್ ನಾಗಯ್ಯ, ರೆವಿನ್ಯೂ ಇನ್ಸ್‍ಪೆಕ್ಟರ್ ಗಣೇಶ್ ಇದ್ದಾರೆ.







