ಮಡಿಕೇರಿ: ಮಾನಸಿಕ ಅಸ್ವಸ್ಥರ ಮುಕ್ತ ಸಮಾಜ ಅಭಿಯಾನ; ವಿಕಾಸ ಜನಸೇವಾ ಟ್ರಸ್ಟ್ ನಿಂದ ಮತ್ತಿಬ್ಬರ ರಕ್ಷಣೆ

ಮಡಿಕೇರಿ, ಆ.4: ಕಂಬಿಬಾಣೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ಅವರಾನ್ (ಅಬ್ರಾಹಂ) ಎಂಬಾತನನ್ನು ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳು ರಕ್ಷಿಸಿ ಬೆಂಗಳೂರಿನ ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಕಾಸ್ ಜನಸೇವಾ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಸ್ವಸ್ಥರ ಮುಕ್ತ ಜಿಲ್ಲೆ ಅಭಿಯಾನ ಮುಂದುವರೆದಿದ್ದು, ಕಂಬಿಬಾಣೆಯಲ್ಲಿ ಒಬ್ಬಾತನನ್ನು ರಕ್ಷಿಸಿ ಚಿಕಿತ್ಸಗೆ ಒಪ್ಪಿಸಿದ್ದಾರೆ.
ಸ್ಥಳೀಯ ಗ್ರಾ.ಪಂ, ಟಾಟಾ ಕಾಫಿ, ಕೂರ್ಗ್ ಫೌಂಡೇಷನ್‍ನ ಅಂಗ ಸಂಸ್ಥೆಯಾದ ಸ್ವಸ್ಥ ಸಂಸ್ಥೆ ಹಾಗೂ ಪ್ರಜಾಸತ್ಯ ದಿನಪತ್ರಿಕೆಯ ಸಹಕಾರದಿಂದ ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್ ಅಲೆದಾಡುತ್ತಿದ್ದ ಅಬ್ರಾಹಂ ಎಂಬಾತನನ್ನು ಪೊಲೀಸರ ಸಮ್ಮುಖದಲ್ಲಿ ವಶಕ್ಕೆ ಪಡೆಯುವ ಕಾರ್ಯ ನಡೆಯಿತು. ನಂತರ ಮಡಿಕೇರಿಯ ನ್ಯಾಯಾಲಯದ ಅನುಮತಿಯೊಂದಿಗೆ ಬೆಂಗಳೂರಿನ ಆರ್.ವಿ.ಎಂ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಅಲ್ಲದೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.
ಟ್ರಸ್ಟ್ ಪ್ರಮುಖ ಪುಟ್ಟಪ್ಪ, ಸಿಬ್ಬಂದಿ ಕೀರ್ತನಾ, ಸ್ವಸ್ಥ ಸಂಸ್ಥೆಯ ಸಿ.ಬಿ.ಆರ್ ಸಂಯೋಜಕ ಮುರುಗೇಶ್, ಸುಂಟಿಕೊಪ್ಪ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಜಯರಾಮ್, ಸಿಬ್ಬಂದಿ ವಿಜಯ ಕುಮಾರ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚೇತನ್, ಗ್ರಾ.ಪಂ ಅಧ್ಯಕ್ಷರುಗಳಾದ ಕೃಷ್ಣ, ಅಬ್ಬಾಸ್, ಪಿ.ಡಿ.ಓ ಗಳಾದ ನಂದೀಶ್, ಗಿರೀಶ್ ಹಾಗೂ ಪತ್ರಕರ್ತರು ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದರು.
ಮತ್ತೊಂದು ಪ್ರಕರಣದಲ್ಲಿ ಸೋಮವಾರಪೇಟೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಿರಣ್ (27) ಎಂಬಾತನನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಹಕಾರದಿಂದ ವಿಕಾಸ ಜನಸೇವಾ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಿತು. ಇತ್ತೀಚಿಗೆ ನಗರದಲ್ಲಿ ಸಾರ್ವಜನಿಕವಾಗಿ ದೊಣ್ಣೆಯನ್ನು ಹಿಡಿದು ವಾಹನಗಳಿಗೆ ಅಡ್ಡಲಾಗಿ ನಿಲ್ಲುವುದು, ಅಸಭ್ಯವಾಗಿ ವರ್ತಿಸಿ ಭಯದ ವಾತಾವರಣ ಮೂಡಿಸುತ್ತಿದ್ದ ಕಿರಣ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ದೀಪಕ್ ಅವರ ನೇತೃತ್ವದಲ್ಲಿ ಟ್ರಸ್ಟ್ ಕಾರ್ಯಾಚರಣೆ ನಡೆಸಿತು ಎಂದು ರಮೇಶ್ ಹೇಳಿದ್ದಾರೆ.







